ಅಲ್ಲಿ ಇಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಇತ್ತ ಚಿತ್ರಮಂದಿರಗಳಿಗೆ ಸಣ್ಣಗೆ ಭಯವೂ ಶುರುವಾಗಿದೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ 13ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ದಿಢೀರನೆ ಮುಂದೂಡಲಾಗಿದೆ. ಮಾರ್ಚ್ 24ರಿಂದ ಶುರುವಾಗಬೇಕಿದ್ದ ಫಿಲಂಫೆಸ್ಟಿವಲ್, ಆರಂಭಕ್ಕೂ ಮೊದಲೇ ವಿವಾದ ಸೃಷ್ಟಿಸಿತ್ತು. ಆದರೆ, ಈಗ ಕಾರ್ಯಕ್ರಮ ಮುಂದೂಡಿಕೆಗೆ ಕಾರಣ ವಿವಾದವಂತೂ ಅಲ್ಲ, ಕೊರೊನಾ.
ಅತ್ತ ಸಿಎಂ ಯಡಿಯೂರಪ್ಪ ಕೂಡಾ ಕಟ್ಟುನಿಟ್ಟಾಗಿ ಕೊರೊನಾ ರೂಲ್ಸ್ ಪಾಲಿಸಿ ಇಲ್ಲವೇ ಲಾಕ್ ಡೌನ್ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಈಗ ಭಯ ಶುರುವಾಗಿರೋದು ಚಿತ್ರಮಂದಿರಗಳಿಗೆ.
ಕಾರಣ ಇಷ್ಟೆ, ಸರ್ಕಾರ ಇಡೀ ದೇಶಕ್ಕೆ ಲಾಕ್ ಡೌನ್ ಮಾಡುವ ಮೊದಲು ಬೀಗ ಜಡಿದಿದ್ದು ಚಿತ್ರಮಂದಿರಗಳಿಗೆ. ಮೊದಲು ರದ್ದಾಗಿದ್ದೇ ಸಿನಿಮಾ ಶೋ. ನಂತರ ಇಡೀ ದೇಶವನ್ನು ಮುಕ್ತಗೊಳಿಸಿದರೂ ಕಟ್ಟಕಡೆಯದಾಗಿ ಓಪನ್ ಮಾಡಿದ್ದು ಚಿತ್ರಮಂದಿರಗಳನ್ನು. ಈಗ ಮತ್ತೆ ಭಯ ಶುರುವಾದರೆ ಮೊದಲ ಪೆಟ್ಟು ಚಿತ್ರಮಂದಿರಗಳಿಗೇ ಬೀಳಬಹುದು ಎನ್ನುವ ಆತಂಕ ಹಲವರದ್ದು. ಈಗಿನ್ನೂ ರಾಬರ್ಟ್, ಹೀರೋ ಹಿಟ್ ಆಗಿ ಚೇತರಿಸಿಕೊಳ್ಳುತ್ತಿರುವ ಚಿತ್ರರಂಗಕ್ಕೆ ಇದು ಭಯ ಹುಟ್ಟಿಸಿರುವುದು ಸುಳ್ಳಲ್ಲ.