ರಾಬರ್ಟ್ ಸಿನಿಮಾ ರಿಲೀಸ್ ಆಗಿ ಬಾಕ್ಸಾಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈ ಮಧ್ಯೆ ಚಿತ್ರಕ್ಕೆ ಪೈರಸಿ ಕಾಟವೂ ಏಟು ಕೊಟ್ಟಿದೆ. ಒಂದು ಕಡೆ ಚಿತ್ರದ ನಿರ್ಮಾಪಕರು ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡುತ್ತಿದ್ದಾರೆ. ಆದರೆ, ರಕ್ತಬೀಜಾಸುರರಂತೆ ಒಂದರ ಹಿಂದೊಂದು ಹೊಸ ಹೊಸ ಲಿಂಕ್ಗಳು ಬೆನ್ನುಹತ್ತಿವೆ. ಇದರ ಮಧ್ಯೆ ಪೈರಸಿ ಮಾಡುತ್ತಿದ್ದವನೊಬ್ಬ ಸಿಕ್ಕಿಬಿದ್ದಿದ್ದಾನೆ. ಹಿಡಿದುಕೊಟ್ಟಿರೋದು ದರ್ಶನ್ ಫ್ಯಾನ್ಸ್.
ವಾಟ್ಸಪ್ನಲ್ಲಿ ಸಿನಿಮಾದ ಲಿಂಕ್ ಮತ್ತು ವಿಡಿಯೋ ಕಳಿಸುತ್ತಿದ್ದ ವಿಶ್ವನಾಥ್ ಎಂಬುವವನನ್ನು ದರ್ಶನ್ ಫ್ಯಾನ್ಸ್ ಬೆನ್ನು ಹತ್ತಿದ್ದಾರೆ. ನಮಗೂ ಚಿತ್ರದ ಪೈರಸಿ ಕಾಪಿ ಬೇಕು, ದುಡ್ಡು ಕೊಡುತ್ತೇವೆ ಎಂದು ವಿಶ್ವನಾಥ್ನನ್ನು ನಂಬಿಸಿದ್ದಾರೆ. ಕೊನೆಗೆ ಆತನ ಬಳಿಯೇ ಲಿಂಕ್ ಮತ್ತು ವಿಡಿಯೋ ಇದೆ ಎಂದು ಗೊತ್ತಾಗುತ್ತಿದ್ದಂತೆಯೇ ಹಿಡಿದು ಅವರದ್ದೇ ಶೈಲಿಯಲ್ಲಿ ಬುದ್ದಿ ಹೇಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಾಗಡಿ ರಸ್ತೆಯಲ್ಲಿರೋ ಪ್ರಸನ್ನ ಚಿತ್ರಮಂದಿರದ ಬಳಿ ಸಿಕ್ಕ ಆರೋಪಿಯನ್ನು ಮಾಗಡಿ ಪೊಲೀಸ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಜಾಲದಲ್ಲಿ ಸಿಕ್ಕಿರುವುದು ವಿಶ್ವನಾಥ್ ಮಾತ್ರ, ಇನ್ನೂ ಕೆಲವರು ತಲೆತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸಿನಿಮಾವನ್ನು ಚಿತ್ರೀಕರಿಸುತ್ತಿದ್ದ ಬಸವೇಗೌಡ ಎಂಬುವವನನ್ನೂ ದರ್ಶನ್ ಅಭಿಮಾನಿಗಳು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು. ಪೈರಸಿ ಮಾಡುವವರಿಗೆ ಇದರ ಸಂದೇಶ ಇಷ್ಟೆ, ದರ್ಶನ್ ಅಭಿಮಾನಿಗಳಿದ್ದಾರೆ ಎಚ್ಚರಿಕೆ..!