ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅವರ ಹೀರೋ ಚಿತ್ರಕ್ಕೆ ಪೈರಸಿ ಕ್ರಿಮಿನಲ್ಸ್ ಕಾಟ ಎದುರಾಗಿತ್ತು. ಒಂದು ಲಿಂಕ್ ಡಿಲೀಟ್ ಮಾಡಿದರೆ ಮತ್ತೊಂದು ಲಿಂಕ್ನಲ್ಲಿ ಸಿನಿಮಾ ಅಪ್ಲೋಡ್ ಆಗುತ್ತಿತ್ತು.ಈ ಬಗ್ಗೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು ರಿಷಬ್ ಶೆಟ್ಟಿ. ಇದರ ನಡುವೆಯೂ ಹೀರೋ ಸಿನಿಮಾ ಥಿಯೇಟರುಗಳಲ್ಲಿ ಒಳ್ಳೆಯ ಕಲೆಕ್ಷನ್ ಕಾಣುತ್ತಿದೆ. ಆ ಪೈರಸಿ ಕ್ರಿಮಿನಲ್ಸ್ ದರ್ಶನ್ ಅಭಿನಯದ ರಾಬರ್ಟ್ ತಂಡವನ್ನೂ ಬಿಟ್ಟಿಲ್ಲ.
ನಂಬಿದ್ರೆ ನಂಬಿ.. ಬಿಟ್ರೆ ಬಿಡಿ.. ಕೇವಲ ಒಂದೇ ದಿನದಲ್ಲಿ ರಾಬರ್ಟ್ ಟೀಂ ಡಿಲೀಟ್ ಮಾಡಿರುವ ಪೈರಸಿ ವಿಡಿಯೋ ಲಿಂಕ್ಗಳ ಸಂಖ್ಯೆ 3 ಸಾವಿರಕ್ಕೂ ಹೆಚ್ಚು. ಅತ್ತ ಥಿಯೇಟರುಗಳಲ್ಲಿ ಫಸ್ಟ್ ಡೇ ದಾಖಲೆ ಬರೆದಿರೋ ರಾಬರ್ಟ್ ಸಿನಿಮಾ ಈಗ ಪೈರಸಿ ವಿರುದ್ಧ ಸಮರವನ್ನೇ ಸಾರಿದೆ.
ನಿರ್ಮಾಪಕ ಉಮಾಪತಿ ಒಂದು ಕಡೆ ಸಿನಿಮಾ ಸೂಪರ್ ಸಕ್ಸಸ್ ಕಂಡಿರುವ ಖುಷಿಯಲ್ಲಿದ್ದರೆ, ಮತ್ತೊಂದು ಕಡೆ ಆ ಖುಷಿಯನ್ನೂ ಮರೆತು ಪೈರಸಿ ವಿರುದ್ಧ ಹೋರಾಡಬೇಕಾಗಿ ಬಂದಿದೆ. ಆರಂಭದಲ್ಲೇ ನಿರ್ಮಾಪಕ ಉಮಾಪತಿ ಇಂತಹ ಪೈರಸಿ ಮಾಡುವವರ ವಿರುದ್ಧ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಆ ಎಚ್ಚರಿಕೆಗೂ ಜಗ್ಗದೆ ದುರ್ಮಾರ್ಗಕ್ಕಿಳಿದಿದ್ದಾರೆ ಪೈರಸಿ ವೀರರು.
ಚಿತ್ರಲೋಕದ ಮನವಿಯೂ ಇಷ್ಟೆ, ಚಿತ್ರಮಂದಿರಗಳನ್ನು ಚಿತ್ರಮಂದಿರದಲ್ಲೇ ನೋಡಿ. ಆಗ ಮಾತ್ರ ಕನ್ನಡ ಚಿತ್ರರಂಗ, ಕನ್ನಡ, ಕೋಟಿ ಕೋಟಿ ಸುರಿದ ನಿರ್ಮಾಪಕ ಎಲ್ಲರೂ ಉಳಿಯುತ್ತಾರೆ. ಪೈರಸಿಯಲ್ಲಿ ನೋಡಿದರೆ ಅದರ ಲಾಭ ಯಾವನೋ ಕಣ್ಣಿಗೆ ಕಾಣದ ಕ್ರಿಮಿನಲ್ ಜೇಬು ಸೇರುತ್ತದೆ. ಅಂತಹ ತಪ್ಪು ಮಾಡಬೇಡಿ.