ಈ ಶುಕ್ರವಾರವಷ್ಟೇ ರಿಲೀಸ್ ಆದ ಹೀರೋಗೆ ಎಲ್ಲ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರುಗಳೂ ಭರ್ತಿಯಾಗಿವೆ. ಮೆಚ್ಚುಗೆಗಳೂ ಭರಪೂರ ಸಿಕ್ಕಿವೆ. ಚಿತ್ರಕ್ಕೆ ಮೌತ್ ಪಬ್ಲಿಸಿಟಿ ಸಿಗುತ್ತಿದೆ. ಈ ಹೊತ್ತಿನಲ್ಲೇ ಹೀರೋಗೆ ವಿಲನ್ಸ್ ಚಿತ್ರ ವಿಚಿತ್ರ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ.
ರಿಷಬ್ ಶೆಟ್ಟಿಯವರ ಹೀರೋ ರಿಲೀಸ್ ಆಗಿದ್ದು ಮಾರ್ಚ್ 5ರಂದು. ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಅಭಿನಯದ ಕಾಮಿಡಿ ಹಾರರ್ ಥ್ರಿಲ್ಲರ್ ಸಿನಿಮಾ ರಿಲೀಸ್ ಆದ ಮೂರೇ ದಿನಗಳಲ್ಲಿ ಪೈರಸಿ ಆಗಿದೆ. ನಮ್ಮ ಹೀರೋ ಸಿನಿಮಾ 2 ಕಡೆ ರನ್ನಿಂಗ್ ಸಕ್ಸಸ್ಫುಲ್. ಒಂದು ಚಿತ್ರಮಂದಿರದಲ್ಲಿ, ಮತ್ತೊಂದು ಪೈರಸಿಯಲ್ಲಿ. ಕಷ್ಟಪಟ್ಟು ಮಾಡಿದ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿ ಆಗಿ, ಆ ಕಾಪಿಗಳು ಎಲ್ಲೆಡೆ ಹರಿದಾಡುತ್ತಿವೆ ಎಂದು ನೋವು ತೋಡಿಕೊಂಡಿದ್ದಾರೆ ರಿಷಬ್ ಶೆಟ್ಟಿ.
ಹಾಗಂತ ರಿಷಬ್ ಶೆಟ್ಟಿ& ಟೀಂ ಸುಮ್ಮನೆ ಕೂತಿಲ್ಲ. ಪೈರಸಿ ತಡೆಯುವವರ ಟೀಂನ್ನೇ ಕಟ್ಟಿಕೊಂಡು ಲಿಂಕ್ಗಳನ್ನು ಡಿಲೀಟ್ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಒಂದು ಕಡೆ ಡಿಲೀಟ್ ಆದರೆ, ಮತ್ತೊಂದು ಕಡೆ ಲಿಂಕ್ ಓಪನ್ ಆಗುತ್ತಲೇ ಇವೆ. ಚಿತ್ರಮಂದಿರಗಳಲ್ಲಿ ಶೂಟ್ ಮಾಡಿ ಬಿಟ್ಟಿದ್ದಾರೆ. ಥಿಯೇಟರಿನವರು ಇದಕ್ಕೆಲ್ಲ ಹೇಗೆ ಅವಕಾಶ ಕೊಡ್ತಾರೆ ಅನ್ನೋದೇ ನನಗೆ ಅರ್ಥ ಆಗ್ತಾ ಇಲ್ಲ ಅನ್ನೋದು ರಿಷಬ್ ಶೆಟ್ಟಿ ಕಂಪ್ಲೇಂಟು.
ಇದು ಚಿತ್ರರಂಗಕ್ಕೆ ಹೊಸದೇನೂ ಅಲ್ಲ. ಈ ಹಿಂದೆ ಕನ್ನಡದಲ್ಲೇ ಪೈಲ್ವಾನ್ ಚಿತ್ರಕ್ಕೆ ಈ ಪ್ರಾಬ್ಲಂ ಎದುರಾಗಿತ್ತು. ಆದರೆ, ಪೈರಸಿಗೆ ಸಪೋರ್ಟ್ ಮಾಡುವ ವೆಬ್ಸೈಟ್ ಮತ್ತಿತರ ಪ್ಲಾಟ್ಫಾರಂಗಳನ್ನು ಅದೇಕೆ ಬ್ಯಾನ್ ಮಾಡ್ತಿಲ್ಲವೋ ಅರ್ಥ ಆಗ್ತಿಲ್ಲ ಅನ್ನೋದು ರಿಷಬ್ ಶೆಟ್ಟಿ ದೂರು.
ಪೈರಸಿ ಕ್ರಿಮಿನಲ್ಸ್ ವಿರುದ್ಧ ವ್ಯವಸ್ಥೆಯೇ ಸೋತು ಹೋದಾಗ ಮತ್ತೇನು ಮಾಡೋಕೆ ಸಾಧ್ಯ. ಒಂದು ಕಡೆ ಅವರು ಹುಡುಕುತ್ತಿದ್ದಾರೆ. ಈ ಹೋರಾಟದಲ್ಲಿ ಪ್ರೇಕ್ಷಕರೂ ಭಾಗವಹಿಸಬೇಕು. ನಿಮಗೆ ಅಂತಾ ಲಿಂಕ್ ಸಿಕ್ಕರೆ ದಯವಿಟ್ಟು ರಿಷಬ್ ಶೆಟ್ಟಿಯವರಿಗೇ ತಲುಪಿಸಿ. ಅದನ್ನು ಅವರೇ ತೆಗೆಯುವ ಪ್ರಯತ್ನ ಮಾಡ್ತಾರೆ. ಸಿನಿಮಾ ಫೀಲ್ಡ್ ಉಳಿಯಬೇಕೆಂಧರೆ ಅದು ಅನಿವಾರ್ಯ. ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದರೆ ಮಾತ್ರ, ಚಿತ್ರರಂಗ ಉಳಿಯೋಕೆ ಸಾಧ್ಯ.