ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಗಲ ಮೇಲೆ ಈಗ ಇರೋ ಅತಿ ದೊಡ್ಡ ಜವಾಬ್ದಾರಿ ರಾಬರ್ಟ್ ಚಿತ್ರವನ್ನು ಗೆಲ್ಲಿಸೋದು. ನಿರ್ಮಾಪಕ ಉಮಾಪತಿ ನೀಡಿರುವ ಆ ಜವಾಬ್ದಾರಿಯನ್ನೇನೋ ದರ್ಶನ್ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ರಾಬರ್ಟ್ ಚಿತ್ರದ ಪ್ರಚಾರ ಅದ್ಧೂರಿಯಾಗಿ ನಡೆಯುತ್ತಿದೆ. ಇದೆಲ್ಲದರ ನಡುವೆ ದರ್ಶನ್ ಹೆಗಲ ಮೇಲೆ ಇನ್ನೊಂದು ಹೊಸ ಜವಾಬ್ದಾರಿ ಬಿದ್ದಿದೆ.
ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಅವರಿಗೆ ಮದುವೆ ಮಾಡಿಸೋ ಜವಾಬ್ದಾರಿ ಅದು. ತರುಣ್, ದರ್ಶನ್ ಅವರಿಗೆ ಇತ್ತೀಚೆಗಿನ ಗೆಳೆಯನಲ್ಲ. ದರ್ಶನ್ ಅವರನ್ನು ತರುಣ್ ಅವರೂ ಅಷ್ಟೇ, ಅಣ್ಣನ ಸ್ಥಾನದಲ್ಲೇ ಇಟ್ಟಿದ್ದಾರೆ. ಮನೆಯಲ್ಲಿ ಇತ್ತೀಚೆಗೆ ಈ ಬಗ್ಗೆ ಮಾತು ಬಂದಾಗ ತರುಣ್ ಮದುವೇನೇ ಆಗಲ್ಲ ಎಂದಿದ್ದರಂತೆ. ಅಮ್ಮ ಒತ್ತಾಯ ಮಾಡಿದ ಮೇಲೆ ರಾಬರ್ಟ್ ರಿಲೀಸ್ ಆದ ಮೇಲೆ ಮದುವೆಗೆ ರೆಡಿ ಎಂದಿದ್ದರಂತೆ ತರುಣ್. ಸ್ಸೋ.. ಈಗ ತರುಣ್ಗೆ ಮದುವೆ ಮಾಡಿಸೋ ಹೊಣೆ ದರ್ಶನ್ ಹೆಗಲೇರಿದೆ.
ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್ ಆದರೆ, 12ಕ್ಕೆ ಮದುವೆ ಫಿಕ್ಸ್. ಹುಡುಗಿಯನ್ನೂ ನೋಡಿಟ್ಟಿದ್ದಾರಂತೆ. ದರ್ಶನ್ ತೋಟದಲ್ಲಿ ಹಸುವೊಂದು ಕರು ಹಾಕಿದ್ದು, ಅದೀಗ ದೊಡ್ಡದಾಗಿದೆ. ತರುಣ್ಗೆ ಆ ಕರುವಿನ ಜೊತೆಯಲ್ಲೇ ಮದುವೆ ಮಾಡೋದಾಗಿ ಕಿಚಾಯಿಸಿದ್ದಾರೆ ದರ್ಶನ್.
ಅಫ್ಕೋರ್ಸ್, ತರುಣ್ ಅವರನ್ನು ಮದುವೆಯಾಗೋಕೆ ಇಷ್ಟ ಇರೋ ಹುಡುಗೀರು ದರ್ಶನ್ ಅವರ ಬಳಿಯೇ ಅಪ್ಲಿಕೇಷನ್ ಹಾಕಿಕೊಳ್ಳಬಹುದು.