ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರದ ಪಾಠಶಾಲಾ ಹಾಡು ರಿಲೀಸ್ ಆಗಿದೆ. ಹಾಡಿನ ಬಗ್ಗೆ ಯಾವ ಮಟ್ಟದ ನಿರೀಕ್ಷೆಯಿತ್ತೋ.. ಅದನ್ನೂ ಮೀರಿ ಹಾಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿರೋದು ವಿಶೇಷ. ಹಾಡಿನಲ್ಲಿ ಸ್ಕೂಲು, ಗುರುಗಳ ನಡುವಿನ ಸಂಬಂಧವನ್ನು ಕಟ್ಟಿಕೊಟ್ಟಿರೋದು ನಿರ್ದೇಶಕ ಸಂತೋಷ್ ಆನಂದ ರಾಮ್. ವಿಜಯ ಪ್ರಕಾಶ್ ಧ್ವನಿಯಲ್ಲಿ ಹಾಡಿಗೆ ಬೇರೆಯದೇ ಆದ ಹಿರಿಮೆ ಸಿಕ್ಕಿದೆ.
ಈ ಹಾಡಿನಲ್ಲಿ ದಿಗ್ಗಜರನ್ನು ಅವರ ಗುರುಗಳ ಜೊತೆ ನೆನಪಿಸಿಕೊಂಡಿರೋದು ವಿಶೇಷ. ಡಾ.ರಾಜ್ ಜೊತೆ ಗುಬ್ಬಿ ವೀರಣ್ಣ, ವಿಷ್ಣು ಜೊತೆ ಪುಟ್ಟಣ್ಣ ಕಣಗಾಲ್, ಸಚಿನ್ ಜೊತೆ ರಮಾಕಾಂತ್ ಅಚ್ರೇಕರ್, ಸ್ವಾಮಿ ವಿವೇಕಾನಂದರ ಜೊತೆ ರಾಮಕೃಷ್ಣ ಪರಮಹಂಸ, ಪಿ.ವಿ.ಸಿಂಧು ಜೊತೆ ಗೋಪಿಚಂದ್, ಉಪೇಂದ್ರ ಜೊತೆ ಕಾಶಿನಾಥ್, ವಿ.ಮನೋಹರ್ ಜೊತೆ ಹಂಸಲೇಖ.. ಹೀಗೆ ಖ್ಯಾತ ಗುರು ಶಿಷ್ಯರನ್ನು ಇಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ ಸಂತೋಷ್ ಆನಂದ ರಾಮ್.
ಈ ಹಾಡಿನ ಲಿರಿಕಲ್ ವಿಡಿಯೋ ನೋಡಿದವರಿಗೆ ಒಂದಂತೂ ಅರ್ಥವಾಗಿದೆ. ಚಿತ್ರದಲ್ಲಿ ಪ್ರಕಾಶ್ ರೈ ಅವರದ್ದು ಗುರುಗಳ ಪಾತ್ರ ಅನ್ನೋ ವಿಷಯ. ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾ ಏಪ್ರಿಲ್ 1ಕ್ಕೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.