ರಾಕಿಂಗ್ ಸ್ಟಾರ್ ಯಶ್ ಈಗ ತುಂಬಾ ಸೀರಿಯಸ್ಸಾಗಿರ್ತಾರೆ. ಸ್ಟಾರ್ ಪಟ್ಟ ಏರಿದ ಮೇಲೆ ಅದು ಸಹಜವೂ ಇರಬಹುದು. ಆದರೆ, ಒಂದಾನೊಂದು ಕಾಲದಲ್ಲಿ ಅವರಾಡಿದ್ದ ತುಂಟಾಟಗಳ ಕಥೆಯೇ ಬೇರೆ. ಅಂತಾದ್ದೊಂದು ತುಂಟಾಟವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ ನಿದಿ üಸುಬ್ಬಯ್ಯ.
`ನಾನಾಗ ನನ್ನ ತಾತನ ಜೊತೆ ಮೈಸೂರಿನಲ್ಲಿದ್ದೆ. ತಾತ ಗ್ರೌಂಡ್ ಫ್ಲೋರಿನಲ್ಲಿ, ನಾನು ಫಸ್ಟ್ ಫ್ಲೋರಿನಲ್ಲಿ. ಒಂದ್ ದಿನ ರಾತ್ರಿ ಯಾರೋ ಒಂದಷ್ಟು ಜನ ಬೈಕಿನಲ್ಲಿ ಬಂದರು. ಪಟಾಕಿ ಹಚ್ಚಿ ನನ್ನ ರೂಮಿಗೆ ಎಸೆದರು. ಕರ್ಟನ್ ಸುಟ್ಟು ಹೋಗಿತ್ತು. ಹೊರಗೆ ಬಂದು ನೋಡಿದರೆ ಕಣ್ಣಿಗೆ ಬಿದ್ದಿದ್ದು ದೂರದಲ್ಲಿ ಹೋಗುತ್ತಿದ್ದ ಬೈಕ್‍ಗಳು ಮಾತ್ರ. ಪೊಲೀಸರಿಗೆಲ್ಲ ಫೋನ್ ಮಾಡಿ ಸೆಕ್ಯುರಿಟಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು' ಎಂದು ಆ ಘಟನೆ ಬಿಚ್ಚಿಟ್ಟಿದ್ದಾರೆ ನಿಧಿ.
ಅಂದಹಾಗೆ ಮುಂದ್ಯಾವತ್ತೋ ಒಂದ್ ದಿನ ನಿಮ್ಮ ಮನೆಗೆ ಪಟಾಕಿ ಎಸೆದಿದ್ದು ನಾನೇ ಎಂದು ಯಶ್ ಹೇಳುವವರೆಗೂ ಅದು ನಿಧಿಗೆ ಗೊತ್ತಿರಲಿಲ್ಲ. ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ್ದ ಯಶ್ ನಿಮ್ಮ ಹತ್ತಿರ ನಾನು ಕ್ಷಮೆ ಕೇಳಬೇಕಿತ್ತು ಎಂದಾಗ ಯಾಕೆ ಎಂದರಂತೆ ನಿಧಿ. ಆಗ ಯಶ್ ತಾವು ಮಾಡಿದ್ದ ಆ ಮಹಾಕಾರ್ಯದ ಕಥೆ ಹೇಳಿದ್ದಾರೆ.
ಪಟಾಕಿ ಎಸೆದಿದ್ದು ಯಾಕೆ..? ನಿಧಿ ಸುಬ್ಬಯ್ಯ ರೂಮಿಗೇ ಯಾಕೆ..? ತುಂಟಾಟದ ಕಥೆಯ ರಹಸ್ಯ ಹಾಗೇ ಇದೆ.