ದರ್ಶನ್ ಎಲ್ಲಿದ್ದರೂ.. ಹೇಗಿದ್ದರೂ ಅಭಿಮಾನಿಗಳು ಮುತ್ತಿಕೊಳ್ಳೋದು ಸಹಜ. ಹುಬ್ಬಳ್ಳಿಯಲ್ಲಿ ಬಹಳ ದಿನಗಳ ನಂತರ ದರ್ಶನ್ ಒಂದು ದೊಡ್ಡ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅಭಿಮಾನಿಗಳ ಕ್ರೇಜ್ ದೊಡ್ಡದಾಗಿಯೇ ಇತ್ತು. ಅಭಿಮಾನಿಗಳನ್ನು ಕಂಟ್ರೋಲ್ ಮಾಡೋಕೆ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯ್ತು. ಅಭಿಮಾನಿಗಳ ಕುರಿತೇ ಮಾತನಾಡಿದ ದರ್ಶನ್
ಅಭಿಮಾನಿಗಳನ್ನು ಗದರಿಸಿದರು. ಜೊತೆಯಲ್ಲಿಯೇ ಪರೋಕ್ಷವಾಗಿ ಇತ್ತೀಚಿನ ಜಗ್ಗೇಶ್ ವಿವಾದವನ್ನು ನೆನಪಿಸುವಂತೆ ಮಾತನಾಡಿದ ದರ್ಶನ್ `ಕನ್ನಡ ಚಿತ್ರರಂಗದಲ್ಲಿ ಎಲ್ಲ ಕಲಾವಿದರದ್ದೂ ಒಂದೇ ಜಾತಿ. ನಾವು ಯಾವ ಜಾತಿಗಾಗಿಯೂ ಹುಟ್ಟಿಲ್ಲ. ಯಾರೊಬ್ಬರ ಸ್ವತ್ತೂ ಅಲ್ಲ. ಅಭಿಮಾನಿಗಳೊಂದೇ ನಮ್ಮ ಜಾತಿ' ಎಂದರಷ್ಟೇ ಅಲ್ಲ `ದರ್ಶನ್ ಅಭಿಮಾನಿಗಳಿಗೆ ಕಾಕಾ ಹೊಡೀತಾನೆ ಅಂತಾರೆ. ನಾನು ಹಾಗೆಲ್ಲ ಮಾಡಲ್ಲ. ಅಭಿಮಾನಿಗಳಿಗೆ ನಾನು ಉಗಿದಿದ್ದೂ ಇದೆ. ತಲೆ ಮೇಲೆ ನಾಲ್ಕು ಬಾರಿಸಿ ಬೈದಿದ್ದೂ ಇದೆ' ಎಂದರು.
ಇದೇ ವೇಳೆ ನಾವು ಗಾಡಿ ಓಡಿಸುವಾಗ ಹತ್ತಿರ ಬರಬೇಡಿ. ಓವರ್ ಟೇಕ್ ಮಾಡೋಕೆ ಹೋಗಬೇಡಿ. ನನ್ನನ್ನು ನೋಡದೇ ಇದ್ದರೂ ಪರವಾಗಿಲ್ಲ. ಮನೆಯಲ್ಲಿ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು ಇರ್ತಾರೆ ಅನ್ನೋದನ್ನು ಮರೆಯಬೇಡಿ ಎಂದು ಬುದ್ದಿವಾದ ಹೇಳಿದರು. ಅಂದಹಾಗೆ ದರ್ಶನ್ ಇಷ್ಟೆಲ್ಲ ಹೇಳಿದ್ದು ರಾಬರ್ಟ್ ಬಿಡಗಡೆಗೆ ಮುನ್ನ ನಡೆದ ಕಾರ್ಯಕ್ರಮದಲ್ಲಿ.