ಶಿವರಾಜ್ ಕುಮಾರ್ ಚಿತ್ರರಂಗ ಪ್ರವೇಶಿಸಿ 35 ವರ್ಷ. ಹ್ಯಾಟ್ರಿಕ್ ಹೀರೋ ಆಗಿ ಬಂದು ಸೆಂಚುರಿ ಹೊಡೆದು ಕರುನಾಡು ಚಕ್ರವರ್ತಿಯಾಗಿರೋ ಶಿವರಾಜ್ ಕುಮಾರ್, ಈಗ ಎಲ್ಲರ ಪಾಲಿಗೆ ಶಿವಣ್ಣ. 1986ರಿಂದ 2021ರವರೆಗಿನ ನನ್ನದೇ ಜರ್ನಿ ನೋಡಿದರೆ, 35 ವರ್ಷ ಹೇಗೆ ಕಳೆಯಿತು ಅಂತಾನೇ ಗೊತ್ತಿಲ್ಲ. ಅಭಿಮಾನಿಗಳು ಕೈಬಿಟ್ಟಿಲ್ಲ. ಅವರ ಪ್ರೀತಿ ದುಪ್ಪಟ್ಟಾಗಿದೆ. ನಟರು, ನಿರ್ದೇಶಕರು, ನಿರ್ಮಾಪಕರು ಈ ಶಿವಣ್ಣನ ಕೈಬಿಟ್ಟಿಲ್ಲ. ಇನ್ನೂ 50 ವರ್ಷ ಮಾಡೋಣ ಬಿಡಿ ಎಂದಿದ್ದಾರೆ ಶಿವಣ್ಣ.
ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ 35ನೇ ವರ್ಷದ ಸಂಭ್ರಮ ಆಚರಿಸಿದ ಶಿವರಾಜ್ ಕುಮಾರ್, ತಮಗೆ ಅಂಟಿಕೊಂಡಿರೋ ರೌಡಿಸಂ ಚಿತ್ರಗಳ ಬಗ್ಗೆ ಹೇಳುತ್ತಾ ``ಇಂತಹ ಪಾತ್ರ ಮಾಡಿಲ್ಲ ಅನ್ನೋ ಕೊರಗು ನನಗಂತೂ ಇಲ್ಲ. ಆದರೆ, ಜನ ನನ್ನ ರೌಡಿಸಂ ಚಿತ್ರಗಳನ್ನೇ ಹೆಚ್ಚು ಇಷ್ಟಪಡ್ತಾರೆ. ಹಾಗಂತ ಅದೇ ಮಾಡ್ತಾ ಹೋದರೆ ಇವನಿಗೆ ಮಾಡೋಕೆ ಬೇರೇನೂ ಕೆಲ್ಸ ಇಲ್ವಾ ಅಂತಾರೆ. ನನ್ನ ಕೌಟುಂಬಿಕ ಚಿತ್ರಗಳೂ ಹಿಟ್ ಆಗಿವೆ. ಲವ್ ಸಬ್ಜೆಕ್ಟ್, ಹಳ್ಳಿಗಾಡಿನ ಕಥೆಗಳೂ ಗೆದ್ದಿವೆ. ಇದನ್ನು ಬಿಟ್ಟು ಇನ್ನೂ ವಿಭಿನ್ನವಾದ ಪಾತ್ರಗಳನ್ನು ಕಾಯುತ್ತಿದ್ದೇನೆ’’ ಎಂದಿದ್ದಾರೆ.
ಹೊಸಬರ ಚಿತ್ರಗಳೂ ಬರುತ್ತಿವೆ. ಕನ್ನಡ ಚಿತ್ರರಂಗವೂ ಬೆಳೆಯುತ್ತಿದೆ. ಹೊಸ ಹೊಸ ಪ್ರತಿಭಾಶಾಲಿಗಳು ಗಮನ ಸೆಳೆಯುತ್ತಿದ್ದಾರೆ. ಆ ಹೊಸಬರ ಆಯ್ಕೆಯಲ್ಲಿ ನಾನಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದೇನೆ ಎನ್ನುವುದೇ ನನಗೆ ಹೆಮ್ಮೆ ಎಂದಿದ್ದಾರೆ ಶಿವರಾಜ್ ಕುಮಾರ್.