ಸೋಷಿಯಲ್ ಮೀಡಿಯಾದಲ್ಲಿ ಕೆಲವು ಕಾಮನ್ ಕಮೆಂಟುಗಳಿರುತ್ತವೆ.. ಗಮನಿಸಿದ್ದೀರಾ.. ಅದರಲ್ಲೂ ವಿಶೇಷವಾಗಿ ಇದು ಸಿನಿಮಾ ಹೀರೋಗಳ ಕುರಿತೇ ಆಗಿರುತ್ತದೆ.
ಯಾವುದಾದರೂ ಸಿನಿಮಾದ ಬಜೆಟ್ ಇಷ್ಟು ಕೋಟಿ ಎನ್ನಿ..
ಇದರ ಬದಲು ಅದನ್ನು ರೈತರಿಗೆ ಕೊಟ್ಟಿದ್ದರೆ ಉದ್ಧಾರವಾಗುತ್ತಿದ್ದರು ಎಂದು ಬರೀತಾರೆ.
ಇನ್ನೇನೋ ಸಿನಿಮಾ ಪ್ರಚಾರಕ್ಕೆ ಹೊರಟರು ಎನ್ನಿ..
ಸೈನಿಕರ ಸುದ್ದಿ ಹಾಕ್ರೋ, ಅವರೇ ದೇಶ ಕಾಯೋದು ಅಂತಾರೆ.
ಮನೆಯಲ್ಲೋ.. ಕುಟುಂಬದವರೊಂದಿಗೋ ಇದ್ದ ಫೋಟೋನೋ, ವಿಡಿಯೋನೋ ಕಾಣಿಸ್ತು ಅನ್ನಿ..
ಇಲ್ಲಿ ರೈತರು ಸಾಯ್ತಿದ್ದಾರೆ, ನೀವು ಎಂಜಾಯ್ ಮಾಡ್ತಿದ್ದೀರಾ ಅಂತಾರೆ.
ಇಂತಹ ಕೊಂಕು ವೀರರು ಸುದೀಪ್ ಅವರನ್ನೂ ಬಿಟ್ಟಿಲ್ಲ. ಇತ್ತೀಚೆಗೆ ಬುರ್ಜ್ ಖಲೀಫಾದಲ್ಲಿ ಸುದೀಪ್ ಅವರ ಕಟೌಟ್ ಪ್ರದರ್ಶನ ಆಯ್ತಲ್ಲಾ.. ಅದಕ್ಕೂ ಈ ಕೊಂಕು ವೀರರು ತಗಾದೆ ತೆಗೆದಿದ್ದರು. ಅಷ್ಟೆಲ್ಲ ಖರ್ಚು ಮಾಡೋ ಬದಲು ಅದನ್ನು ರೈತರಿಗೆ ಕೊಡಬೇಕಿತ್ತು, ಸ್ಕೂಲುಗಳಿಗೆ ಕೊಡಬೇಕಿತ್ತು.. ಇತ್ಯಾದಿ ಇತ್ಯಾದಿ.. ಇಂತಹ ಕೊಂಕು ವೀರರಿಗೆ ಸುದೀಪ್ ಮುಟ್ಟಿನೋಡಿಕೊಳ್ಳೋ ಉತ್ತರ ಕೊಟ್ಟಿದ್ದಾರೆ.
ಯಾರಪ್ಪನ ಮನೆಯ ದುಡ್ಡನ್ನೂ ನಾನು ಖರ್ಚು ಮಾಡಿಲ್ಲ. ಎಲ್ಲರ ದುಡ್ಡು ಸಹ ಸ್ವಂತ ತಮ್ಮ ಅಪ್ಪನದ್ದೇ ಅಂತಾ ಕೆಲವರು ತಿಳಿದುಕೊಂಡಿದ್ದಾರೆ. ನಾವು ಏನು ಮಾಡಿದರೂ ಇಂತಹ ಟೀಕೆ ಮಾಡುತ್ತಲೇ ಇರುತ್ತಾರೆ. ನಾನು ಏನು ಅನ್ನೋದು ನನ್ನ ಅಪ್ಪ, ಅಮ್ಮನಿಗೆ, ಕುಟುಂಬದವರಿಗೆ, ಗೆಳೆಯರಿಗೆ ಮತ್ತು ಅಭಿಮಾನಿಗಳಿಗೆ ಗೊತ್ತು. ಅಷ್ಟು ಸಾಕು. ನಾನೊಬ್ಬ ನಟ ಎಂಬ ಕಾರಣಕ್ಕೆ ನಾನು ಸಮಾಜ ಸೇವೆ ಮಾಡ್ತಾ ಇಲ್ಲ. ನನಗೆ ಅದರಿಂದ ಆತ್ಮ ಸಂತೋಷ ಸಿಕ್ಕುತ್ತಿದೆ. ದೇವರು ನನಗೆ ಶಕ್ತಿ ನೀಡಿರುವಷ್ಟೂ ದಿನ ಈ ಕೆಲಸ ಮಾಡುತ್ತೇನೆ. ಸೇವೆ ಮಾಡೋಕೆ ರಾಜಕೀಯಕ್ಕೆ ಬರಬೇಕು ಅಂತೇನೂ ಇಲ್ಲ. ನನ್ನ ಸ್ವಂತ ಹಣದಲ್ಲಿ ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ಸುದೀಪ್ ಅವರು ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಹಲವು ಅಸಹಾಯಕರಿಗೆ ಊರುಗೋಲಾಗುತ್ತಿದ್ದಾರೆ. ಕೆಲವು ಕೆಲಸಗಳು ತಂತಾನೆ ಸುದ್ದಿಯೂ ಆಗುತ್ತವೆ. ಸುದ್ದಿಯಾಗದೆ ಹೋದ ಕೆಲಸಗಳು ಅದೆಷ್ಟೋ..
ಅಂದಹಾಗೆ.. ಸುದೀಪ್ ಇಷ್ಟೆಲ್ಲ ಮಾತನಾಡುವಾಗ ಇಲ್ಲಿ ಕೂತ್ಕೊಂಡ್ ಮಾತನಾಡೋ ಬದಲು, ಅಲ್ಲಿ ಪ್ರತಿಭಟನೆ ಮಾಡ್ತಿರೋ ರೈತರ ಜೊತೆ ಹೋಗಿ ಕೂತ್ಕೊಬಹುದಿತ್ತು ಅನ್ನೋ ಕಮೆಂಟ್ ಬರಬೇಕಿತ್ತು. ಬಂದಂತೆ ಕಾಣ್ತಿಲ್ಲ. ಆಶ್ಚರ್ಯ...!!!