ರಾಬರ್ಟ್. ದರ್ಶನ್ ನಟಿಸಿರುವ ತರುಣ್ ಸುಧೀರ್ ನಿರ್ದೇಶನದ ಉಮಾಪತಿ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ. ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡದ ಸ್ಟಾರ್ ನಟರ ಚಿತ್ರಗಳು ಕ್ಯೂನಲ್ಲಿರೋ ಕಾರಣ, ಒಂದಕ್ಕೊಂದು ಎದುರಾಳಿಯಾಗಬಾರದು ಎಂಬ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಕುಳಿತು ನಿರ್ಧರಿಸಿರುವ ರಿಲೀಸ್ ಡೇಟ್ ಮಾರ್ಚ್ 11. ವಿಶೇಷ ಅಂದ್ರೆ ತೆಲುಗಿನಲ್ಲೂ ಬರುತ್ತಿರೋ ಈ ಚಿತ್ರಕ್ಕೆ ಅಲ್ಲಿನ ವಿತರಕರೂ ಓಕೆ ಎಂದಿದ್ದರು. ಅದೇ ಮಾರ್ಚ್ 11ನೇ ತಾರೀಕಿಗೆ. ಆದರೆ ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆ ವಿತರಣೆಗೆ ಒಪ್ಪಿಕೊಂಡಿದ್ದ ಅಲ್ಲಿನ ವಿತರಕರು ಉಲ್ಟಾ ಹೊಡೆಯುತ್ತಿದ್ದಾರೆ.
ಮಾರ್ಚ್ 11ರಂದು ತೆಲುಗಿನಲ್ಲಿ 4 ಚಿತ್ರಗಳು ರಿಲೀಸ್ ಆಗುತ್ತಿವೆಯಂತೆ. ಹೀಗಾಗಿ ಕನ್ನಡದಿಂದ ಡಬ್ ಆಗಿ ಬರುತ್ತಿರುವ ರಾಬರ್ಟ್ಗೆ ಥಿಯೇಟರುಗಳೇ ಇಲ್ಲ. ಒಂದು ವಾರ ಬಿಟ್ಟು ಬನ್ನಿ ಎನ್ನುತ್ತಿದ್ದಾರಂತೆ. ರಾಬರ್ಟ್ ಚಿತ್ರತಂಡವನ್ನು ಈ ವಾದ ಕೆರಳಿಸಿದೆ. ಅದೀಗ ಫಿಲಂ ಚೇಂಬರ್ ಮೆಟ್ಟಿಲೇರಿದೆ.
ಅವರದ್ದು 4 ಸಣ್ಣ ಸಿನಿಮಾಗಳಿವೆಯಂತೆ. ನಮ್ಮ ಸಿನಿಮಾಗಳಿಂದ ಅವರಿಗೆ ತೊಂದರೆ ಆಗುತ್ತಿದೆಯಂತೆ. ಯಾಕೆ? ಅವರ ಹೀರೋ ಸಿನಿಮಾಗಳಿಂದ ನಾವು ತೊಂದರೆ ತೆಗೆದುಕೊಳ್ಳುತ್ತಿಲ್ಲವೇ? ಇದು ನಾವು ನೀವು ಕುಳಿತುಕೊಂಡು ಮಾತನಾಡುವುದಲ್ಲ. ಮೊದಲು ನಮ್ಮಲ್ಲಿರುವವರು ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳಬೇಕಿದೆ. ತಮಿಳು, ತೆಲುಗಿನವರಿಗೆ ಇರುವಷ್ಟು ಭಾಷಾಭಿಮಾನ ನಮ್ಮವರಿಗಿಲ್ಲ. ಇದನ್ನು ನಾನು ಓಪನ್ ಆಗಿ ಹೇಳುತ್ತೇನೆ ಎಂದು ಗುಡುಗಿದ್ದಾರೆ ದರ್ಶನ್.
ಯಾರಾದ್ರೂ ತಮಿಳಿನವನು ಬಂದರೆ, ನಾವು ಅವರ ಜೊತೆ ತಮಿಳಿನಲ್ಲಿ ಮಾತನಾಡುತ್ತೇವೆ. ತೆಲುಗಿನವನು ಬಂದರೆ ತೆಲುಗಿನಲ್ಲಿ ಮಾತನಾಡುತ್ತೇವೆ. ಆದರೆ, ಅವರಲ್ಲಿ ಒಬ್ಬರಾದರೂ ಕನ್ನಡದಲ್ಲಿ ಮಾತನಾಡುತ್ತಾರಾ? ಕನ್ನಡದವರು ಹೋಗಿ ಅಲ್ಲಿ ಮಾರ್ಕೆಟ್‌ನ ಆವರಿಸಿಕೊಳ್ಳುತ್ತಾರೆ ಅನ್ನೋ ಭಯ ಅವರಿಗೆ ಶುರುವಾಗಿದೆ ಎಂದಿರೋ ದರ್ಶನ್,
'ನಾನಿಲ್ಲಿ 'ರಾಬರ್ಟ್' ಚಿತ್ರ ಒಂದರ ಪರವಾಗಿ ಬಂದಿಲ್ಲ. ನನ್ನದಾಗಲೇ 50 ಸಿನಿಮಾ ಆಗಿದೆ. ಆದರೆ, ಈಗಿನ ಯುವನಟರ ಕಥೆ ಏನು..? ಯುವ ಕಲಾವಿದರು ಒಳ್ಳೆ ಚಿತ್ರಗಳೊಂದಿಗೆ ಬರುತ್ತಿದ್ದಾರೆ. ಅವರಿಗೆ ದಾರಿಯಾಗಲೀ ಎಂಬುದು ನನ್ನ ಉದ್ದೇಶ ಎಂದಿದ್ದಾರೆ.
ರಾಬರ್ಟ್ ಚಿತ್ರ ಮಾರ್ಚ್ 11ರಂದೇ ತೆಲುಗಿನಲ್ಲೂ ರಿಲೀಸ್ ಆಗಲಿದೆ. ಅವರ ಜೊತೆ ಕುಳಿತು ಮಾತನಾಡುತ್ತೇವೆ. ಅಕಸ್ಮಾತ್ ಆಗದೇ ಹೋದರೆ, ತೆಲುಗು ಚಿತ್ರಗಳೂ ಕನ್ನಡದಲ್ಲಿ ಇದೇ ಪರಿಸ್ಥಿತಿ ಎದುರಿಸಲಿವೆ ಎಂದಿದ್ದಾರೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು.