ಡ್ರಗ್ಸ್ ದಂಧೆ ಕೇಸ್‍ನಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಕೊನೆಗೂ ಜೈಲಿಂದ ಬಿಡುಗಡೆಯಾಗಿದ್ದಾರೆ. ಸುಪ್ರೀಂಕೋರ್ಟ್ ಜಾಮೀನು ನೀಡಿದ 3 ದಿನಗಳ ನಂತರ ರಾಗಿಣಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. 144 ದಿನಗಳ ನಂತರ.
2020ರ ಸೆಪ್ಟೆಂಬರ್ 4ರಂದು ಅರೆಸ್ಟ್ ಆಗಿದ್ದ ರಾಗಿಣಿಗೆ ಶುಕ್ರವಾರ ಸುಪ್ರೀಂಕೋರ್ಟ್‍ನಲ್ಲಿ ಜಾಮೀನು ಸಿಕ್ಕಿತ್ತು. ಆದರೆ, ಶ್ಯೂರಿಟಿ ಷರತ್ತುಗಳನ್ನು ಪೂರೈಸಲು ವಿಳಂಬವಾದ ಹಿನ್ನೆಲೆಯಲ್ಲಿ ರಾಗಿಣಿ ಬಿಡುಗಡೆ ಆಗಿರಲಿಲ್ಲ.
ರಾಗಿಣಿ ತಂದೆ ರಾಕೇಶ್ ದ್ವಿವೇದಿ, ತಾಯಿ ರೋಹಿಣಿ ದ್ವಿವೇದಿ, ತಮ್ಮ ರುದ್ರಾಕ್ಷ್ ರಾಗಿಣಿಯನ್ನು ಮನೆಗೆ ಕರೆದುಕೊಂಡು ಬಂದರು. ಜೈಲಿನ ಸಮೀಪವೇ ಇದ್ದ ಮುನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಗಿಣಿ ಮನೆಗೆ ತೆರಳಿದರು. ಮನೆಯ ಬಳಿ ರಾಗಿಣಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಅಂದಹಾಗೆ ರಾಗಿಣಿಗೆ ಜಾಮೀನು ನೀಡಿದ್ದು ಅವರದ್ದೇ ಚಿತ್ರದ ನಿರ್ಮಾಪಕರು. ಓ ಪ್ರೀತಿಯೇ ಎಂಬ ಸಿನಿಮಾ ನಿರ್ಮಿಸಿರುವ ಚಿನ್ನಸ್ವಾಮಿ ಹಾಗೂ ಕೃಷ್ಣ ರಾಗಿಣಿಗೆ ಜಾಮೀನು ಕೊಟ್ಟರು. ಚಿನ್ನಸ್ವಾಮಿ ಸೂಪರ್ ಡಿಸ್ಕೌಂಟ್ ಎಂಬ ಕಂಪೆನಿಯ ಮಾಲೀಕರು ಕೂಡಾ ಹೌದು. ಆ ಕಂಪೆನಿಗೆ ರಾಗಿಣಿ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಕನಕಪುರ ನಗರಸಭೆಯ ಮಾಜಿ ಸದಸ್ಯರಾದ ಚಿನ್ನಸ್ವಾಮಿ, ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರೂ ಹೌದು.
ಆರೋಗ್ಯದ ಸಮಸ್ಯೆ ಇದೆ. ಎಲ್ಲವೂ ಸರಿ ಹೋದ ಬಳಿಕ ಮಾಧ್ಯಮದವರ ಎದುರು ಬರಲಿದ್ದೇನೆ. ಹೇಳೋದಕ್ಕೆ ತುಂಬಾ ವಿಷಯಗಳಿವೆ ಎಂದಿದ್ದಾರೆ ರಾಗಿಣಿ.