ಡಾ.ರಾಜ್ ಕುಮಾರ್ ಅವರನ್ನು ಅಭಿನಯದಲ್ಲಿ ಅನುಕರಿಸುವ ಪ್ರಯತ್ನ ಮಾಡಿದವರು ಒಬ್ಬಿಬ್ಬರಲ್ಲ. ಈಗ ಆ ಲಿಸ್ಟಿಗೆ ಧ್ರುವ ಸರ್ಜಾ ಕೂಡಾ ಸೇರಿ ಹೋಗಿದ್ದಾರೆ.
ನಾನು ಅಣ್ಣಾವ್ರಿಂದ ಏನೋ ಒಂದನ್ನು ಕದ್ದಿದ್ದೀನಿ. ಡಾ.ರಾಜ್ ಕುಮಾರ್ ಒಂದು ಲೈಬ್ರರಿ ಇದ್ದ ಹಾಗೆ. ಲೈಬ್ರರಿಯಲ್ಲಿ ತುಂಬಾ ಪುಸ್ತಕಗಳಿರುತ್ವೆ. ಆ ಪುಸ್ತಕಗಳಲ್ಲಿರೋ ಒಂದು ಪುಸ್ತಕದ ಒಂದು ಗೆರೆಯನ್ನ ಕದ್ದಿದ್ದೇನೆ. ಕಳ್ಳತನಾ ಅಂತಾದ್ರೂ ಅನ್ನಿ, ಕಾಪಿ ಅಂತಾದ್ರೂ ಅನ್ನಿ. ಸಿನಿಮಾ ನೋಡಿದ ತಕ್ಷಣ ನಿಮಗೆ ಗೊತ್ತಾಗುತ್ತೆ. ಅದೇನು ಅಂತಾ ಎಂದು ಹೇಳಿಕೊಂಡಿದ್ದಾರೆ ಸ್ವತಃ ಧ್ರುವ ಸರ್ಜಾ. ಅಂದಹಾಗೆ ಧ್ರುವ, ರಾಜ್`ರನ್ನು ಕಾಪಿ ಮಾಡಿರೋದು ಪೊಗರು ಚಿತ್ರದಲ್ಲಿ.
ವಿಶೇಷ ಅಂದ್ರೆ ಆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರೂ ಒಂದು ಸ್ಪೆಷಲ್ ಪಾತ್ರದಲ್ಲಿ ನಟಿಸಿದ್ದಾರೆ. ಧ್ರುವ ಬಗ್ಗೆ ಮನದುಂಬಿ ಹೊಗಳಿದ ರಾಘು ಧ್ರುವ ಅವರಲ್ಲಿ ನಾನು ನನ್ನ ಶಿವಣ್ಣ ಮತ್ತ ಅಪ್ಪು ಇಬ್ಬರನ್ನೂ ಕಂಡೆ, ಇದಕ್ಕಿಂತ ಹೆಚ್ಚಿಗೆ ಹೇಳೋಕೆ ನನಗೆ ಬರಲ್ಲ. ಧ್ರುವ ಅವರನ್ನು ಇಡೀ ಜಗತ್ತು ತಿರುಗಿ ನೋಡುತ್ತೆ ಎಂದಿದ್ದಾರೆ.
ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶನವಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರೋ ಚಿತ್ರ ಫೆಬ್ರವರಿ 19ರಂದು ತೆರೆ ಕಾಣಲಿದೆ. `ನನ್ನ ಪ್ರತಿ ಚಿತ್ರವನ್ನೂ ಫಸ್ಟ್ ಡೇ ಫಸ್ಟ್ ಶೋ ಅಣ್ಣನ ಜೊತೆಯಲ್ಲೇ ನೋಡ್ತಾ ಇದ್ದೆ. ಈ ಬಾರಿ ಅಣ್ಣ ಇಲ್ಲ. ಈ ಚಿತ್ರವನ್ನು ಅವನಿಗೇ ಅರ್ಪಿಸುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ ಧ್ರುವ ಸರ್ಜಾ.