ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿದ್ದು 2018ರ ಕೊನೆಯಲ್ಲಿ. ನಂತರ 2019ರ ವರ್ಷವಿಡೀ ಸದ್ದು ಮಾಡಿದ ಸಿನಿಮಾ ದುಡಿದದ್ದು 300 ಕೋಟಿಗೂ ಹೆಚ್ಚು. ಕನ್ನಡವೊಂದರಲ್ಲೇ 100 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದ ಸಿನಿಮಾ ಅದು. ಈಗ ಕೆಜಿಎಫ್ ಚಾಪ್ಟರ್ 2 ಬರ್ತಾ ಇದೆ. ಟೀಸರ್ ಹೊರಬಿದ್ದಿದೆ.
ತಾರಾಗಣ ಮೊದಲ ಭಾಗಕ್ಕಿಂತಲೂ ಭರ್ಜರಿಯಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಎಂಟ್ರಿಯಾಗಿದೆ. ಹೀಗಾಗಿ ಸಹಜವಾಗಿಯೇ ಚಿತ್ರದ ಬಜೆಟ್ ಮತ್ತು ವೇಯ್ಟೇಜ್ ಎರಡೂ ಜಾಸ್ತಿಯಾಗಿದೆ. ಒಂದು ಮೂಲದ ಪ್ರಕಾರ ಕೆಜಿಎಫ್ ಚಾಪ್ಟರ್ 2ಗಾಗಿ ಚಿತ್ರತಂಡ ಖರ್ಚು ಮಾಡಿರೋದು 100 ಕೋಟಿಗೂ ಹೆಚ್ಚು. ವಿಚಿತ್ರ ಮತ್ತು ವಿಶೇಷವೆಂದರೆ ಕೆಜಿಎಫ್ ಚಾಪ್ಟರ್ 1 ಚಿತ್ರೀಕರಣದ ವೇಳೆಯಲ್ಲೇ 2ನೇ ಭಾಗದ ಬಹುತೇಕ ಭಾಗಗಳ ಚಿತ್ರೀಕರಣವಾಗಿತ್ತು. ಹೀಗಿದ್ದರೂ 2ನೇ ಭಾಗದ ಬಾಕಿ ಚಿತ್ರೀಕರಣದ ಬಜೆಟ್ 100 ಕೋಟಿ ದಾಟಿದೆಯಂತೆ.
ಚಿತ್ರದ ಅತಿ ದೊಡ್ಡ ಖರ್ಚು ಚಿತ್ರದ ಕ್ಲೈಮಾಕ್ಸ್. ಸಂಜಯ್ ದತ್ ಮತ್ತು ಯಶ್ ಮಧ್ಯೆ ನಡೆಯೋ ಅದೊಂದು ಕ್ಲೈಮಾಕ್ಸ್ ದೃಶ್ಯಕ್ಕಾಗಿ 12 ಕೋಟಿ ಖರ್ಚು ಮಾಡಿದ್ದಾರಂತೆ ವಿಜಯ್ ಕಿರಗಂದೂರು. ಪ್ರಶಾಂತ್ ನೀಲ್ ಕಲ್ಪನೆಯಂತೆ ಆ ದೃಶ್ಯ ಅದ್ಭುತವಾಗಿ ಮೂಡಿಬಂದಿದೆಯಂತೆ.
ಕನ್ನಡದಲ್ಲಿ 12 ಕೋಟಿಯಲ್ಲಿ ಅದ್ಧೂರಿ ಚಿತ್ರವನ್ನೇ ರೆಡಿ ಮಾಡುತ್ತಾರೆ. ಅಂಥಾದ್ದರಲ್ಲಿ ಕನ್ನಡದ ಬಹು ನಿರೀಕ್ಷಿತ ಚಿತ್ರವೊಂದರ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣಕ್ಕೇ 12 ಕೋಟಿ ಸುರಿದಿದ್ದಾರೆ ಎಂದರೆ.. ಆ ಸೀನ್ ಹೇಗಿರಬೇಕು..