ಕೊರೊನಾ ಲಾಕ್ ಡೌನ್ ಮುಗಿದು ಎಲ್ಲವೂ ಓಪನ್ ಆಗಿದ್ದರೂ.. ಈಗಲೂ ನಿರ್ಬಂಧ ಎದುರಿಸುತ್ತಿರುವ ಏಕೈಕ ವಲಯ ಸಿನಿಮಾ ಥಿಯೇಟರ್. ಲಾಕ್ ಡೌನ್ ಶುರುವಾಗುವ ಒಂದು ತಿಂಗಳ ಮೊದಲೇ ಲಾಕ್ ಆದ ಥಿಯೇಟರ್ಗಳು, ಓಪನ್ ಆಗಿ 2 ತಿಂಗಳಾದರೂ ಸಂಪೂರ್ಣ ಮುಕ್ತಿ ಪಡೆದಿಲ್ಲ. ತಮಿಳುನಾಡು ಸರ್ಕಾರ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದರೂ, ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ವಾಪಸ್ ಪಡೆಯಬೇಕಾಯ್ತು. ಈ ಎಲ್ಲದರ ಹಿಂದೆ ರಿಲಯನ್ಸ್ನ ಅಂಬಾನಿ ಕೈವಾಡ ಇದೆಯಾ..? ದರ್ಶನ್ ಅನುಮಾನದ ಪ್ರಕಾರ ಹೌದು.
ಈಗ ಎಲ್ಲವೂ ಮೊಬೈಲ್ನಲ್ಲಿ ಸಿಗುತ್ತಿದೆ. ಅಂಬಾನಿಯವರ 5ಜಿ ಬೇರೆ ಬರುತ್ತಿದೆ. 5ಜಿ ಓಡಬೇಕು ಅಂದ್ರೆ ಒಟಿಟಿ ಸಿನಿಮಾಗಳು ಓಡಬೇಕು. ಆನ್ಲೈನ್ ಸಿನಿಮಾ ರನ್ ಆಗಬೇಕು. ಥಿಯೇಟರುಗಳು ಓಪನ್ ಇದ್ದರೆ ಅದು ಸಾಧ್ಯವಾಗಲ್ಲ. ಒಟಿಟಿ ಕುಸಿಯುತ್ತೆ. ಹೀಗಾಗಿ ದೊಡ್ಡ ದೊಡ್ಡವರಿಗೆ ಹೇಳಿ ಥಿಯೇಟರುಗಳಿಗೆ ಬೀಗ ಹಾಕುವಂತೆ ಮಾಡಿರಬಹುದು.
ಯೆಸ್, ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವ್ಯಕ್ತಪಡಿಸಿರುವ ಅನುಮಾನ. ಇದರ ನಡುವೆಯೇ ಮಾರ್ಚ್ 11ರಂದು ರಾಬರ್ಟ್ ಚಿತ್ರವನ್ನು ಥಿಯೇಟರಿನಲ್ಲಿ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ ದರ್ಶನ್. ಗುಡ್ ಲಕ್.