ದೇಶಾದ್ಯಂತ ಶೇ.50ರಷ್ಟು ಪ್ರೇಕ್ಷಕರಿಗೆ ಸಿನಿಮಾ ಪ್ರದರ್ಶನ ಮಾಡಬೇಕು ಎಂದು ರೂಲ್ಸ್ ನಡೆಯುತ್ತಿರುವಾಗ ತಮಿಳುನಾಡು ಧೈರ್ಯವಾಗಿ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿ ಇನ್ನು ಮುಂದೆ ಶೇ.100ರಷ್ಟು ಥಿಯೇಟರ್ ಓಪನ್ ಆಗಲಿವೆ. ಅರ್ಥಾತ್, ಚಿತ್ರಮಂದಿರದ ಸಾಮಥ್ರ್ಯ ಎಷ್ಟಿದೆಯೋ, ಅಷ್ಟೂ ಪ್ರೇಕ್ಷಕರಿಗೆ ಸಿನಿಮಾ ನೋಡುವ ಅವಕಾಶ.
ಕೊರೊನಾದಿಂದಾಗಿ ತತ್ತರಿಸಿ ಹೋಗಿದ್ದ ಚಿತ್ರರಂಗ, ಶಾಕ್‍ನಿಂದ ಇನ್ನೂ ಹೊರಬಂದಿರಲೇ ಇಲ್ಲ. ಕನ್ನಡದಲ್ಲಷ್ಟೇ ಅಲ್ಲ, ದೇಶದ ಯಾವ ಚಿತ್ರರಂಗದಲ್ಲೂ ಸ್ಟಾರ್ ನಟರ ಚಿತ್ರಗಳು ಟಾಕೀಸಿಗೆ ಬಂದಿರಲಿಲ್ಲ. ಆದರೆ ತಮಿಳುನಾಡಿನಲ್ಲಿ ಅದು ಸಾಧ್ಯವಾಗಿದೆ. ಇತ್ತೀಚೆಗೆ ತಮಿಳಿನಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೇ ನಟಿಸಿರುವ ಮಾಸ್ಟರ್ ಸಿನಿಮಾ, ಪೊಂಗಲ್‍ಗೆ ರಿಲೀಸ್ ಎಂದು ಘೋಷಿಸಿಕೊಂಡಿತ್ತು. ಅದಕ್ಕೂ ಮುನ್ನ ವಿಜಯ್, ತಮಿಳುನಾಡು ಸಿಎಂ ಜೊತೆ ಮಾತನಾಡಿದ್ದರು. ಆ ಮಾತುಕತೆಯೇ ಫಲಶೃತಿಯೇ ಇದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇದು ತಮಿಳು ಚಿತ್ರರಂಗಕ್ಕೆ ಗುಡ್ ನ್ಯೂಸ್.
ಅಫ್‍ಕೋರ್ಸ್, ಅಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದೇ ಹೋದರೆ, ಅದು ಕರ್ನಾಟಕಕ್ಕೂ ಕಾಲಿಡಬಹುದು. ಸ್ಟಾರ್ ಚಿತ್ರಗಳು ರಿಲೀಸ್ ಆಗಬಹುದು. ಉಳಿದಂತೆ ತಮಿಳುನಾಡಿನಲ್ಲಿ 100% ಪ್ರೇಕ್ಷಕರಿಗೆ ಅವಕಾಶವಿದ್ದರೂ, ಕೊರೊನಾ ರೂಲ್ಸ್ ಮುರಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ ಅಲ್ಲಿನ ರಾಜ್ಯ ಸರ್ಕಾರ.