ಬೆಂಗಳೂರು ನಗರ ಮತ್ತು ಗಾಂಧಿನಗರ ಎರಡನ್ನೂ ಬೆಚ್ಚಿ ಬೀಳಿಸಿದ್ದ ಘಟನೆಯ ಒಂದೊಂದೇ ಮಾಹಿತಿ ಹೊರಬರುತ್ತಿದ್ದಂತೆ ಕಥೆ ಬೇರೆಯದೇ ತಿರುವು ಪಡೆದುಕೊಳ್ಳುತ್ತಿದೆ. ಮುಂಜಾನೆ ಬೀಟಿನಲ್ಲಿದ್ದ ಜಯನಗರ ಪೊಲೀಸರು ಅರೆಸ್ಟ್ ಮಾಡಿದ್ದ 7 ಜನ ಸುಪಾರಿ ಕಿಲ್ಲರ್‍ಗಳು ಭಯಾನಕ ಸಂಗತಿಗಳನ್ನೇ ಬಾಯಿ ಬಿಡುತ್ತಿದ್ದಾರೆ.
ಮೊದಲಿಗೆ ಹಂತಕರ ಟಾರ್ಗೆಟ್ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಎನ್ನಲಾಗಿತ್ತು. ಆದರೆ, ಈಗ ಇನ್ನಷ್ಟು ಮಾಹಿತಿ ಹೊರಬಿದ್ದಿದೆ. ಉಮಾಪತಿ ಶ್ರೀನಿವಾಸ್, ಹಂತಕರ ಲಿಸ್ಟಿನಲ್ಲೇ ಇರಲಿಲ್ಲ. ಬದಲಿಗೆ ಉಮಾಪತಿ ಅವರ ದೊಡ್ಡಪ್ಪನ ಮಗ ದೀಪಕ್ ಇದ್ದ. ಹಂತಕರಿಗೆ ಸುಪಾರಿ ಕೊಟ್ಟಿದ್ದವನು ಬಾಂಬೆ ರವಿ.
ಆದರೆ ಬಾಂಬೆ ರವಿ, ಟಾರ್ಗೆಟ್ ಯಾರು ಅನ್ನೋದನ್ನ ಹೇಳದೆ ಗುಟ್ಟಾಗಿ ಇಟ್ಟಿದ್ದ. ಕೊನೆಯ ಕ್ಷಣದಲ್ಲಿ ಹಂತಕರಿಗೆ ತಮ್ಮ ಟಾರ್ಗೆಟ್ ಯಾರು ಅನ್ನೋದು ಗೊತ್ತಾಗಿತ್ತು. ಅರೆಸ್ಟ್ ಆಗಿದ್ದವರೂ ಕೂಡಾ ಪೊಲೀಸರನ್ನು ಕನ್‍ಫ್ಯೂಸ್ ಮಾಡಲೆಂದು ಉಮಾಪತಿ ಹೆಸರು ಹೇಳಿದ್ದರು. ಸದ್ಯಕ್ಕೆ ಬಾಂಬೆ ರವಿ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ನಿರ್ಮಾಪಕ ಉಮಾಪತಿ ಪೊಲೀಸ್ ಕಮಿಷನರ್ ಕಮಲ್ ಪಂತ್‍ರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ. ನನಗೆ ಈ ಬಾಂಬೆ ರವಿ ಯಾರು ಅನ್ನೋದೇ ಗೊತ್ತಿಲ್ಲ. ಸುಖಾಸುಮ್ಮನೆ ನನ್ನ ಹೆಸರು ಪ್ರಕರಣದಲ್ಲಿ ಥಳುಕು ಹಾಕಿಕೊಂಡಿದೆ. ಎಲ್ಲಿಯೂ ನನ್ನ ಹೆಸರಿಲ್ಲ ಎಂದು ಕಮಿಷನರೇ ನನಗೆ ಹೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಉಮಾಪತಿ.