ಶಕೀಲಾ, 90ರ ದಶಕದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಹೆಸರು. ಶಕೀಲಾ ಸಿನಿಮಾ ಎದುರು ಮುಮ್ಮಟ್ಟಿ, ಮೋಹನ್ ಲಾಲ್ರಂತಾ ನಟರ ಚಿತ್ರಗಳೂ ಸೋತು ಸೊರಗಿದ್ದವು. ಬಿ ದರ್ಜೆಯ ಸಿನಿಮಾಗಳು ಮಲಯಾಳಂ ದಾಟಿ, ತಮಿಳು, ತೆಲುಗು, ಕನ್ನಡದ ಮಾರುಕಟ್ಟೆಯಲ್ಲೂ ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದವು. ಅಂತಹ ಶಕೀಲಾ ಜೀವನ ಚರಿತ್ರೆ ಈಗ ಸಿನಿಮಾ ಆಗಿದೆ.
ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಶಕೀಲಾ ಅವರ ಜೀವನ ಚರಿತ್ರೆಯನ್ನಿಟ್ಟುಕೊಂಡು ಚೆಂದದ ಸಿನಿಮಾ ಮಾಡಿದ್ದಾರೆ. ಶಕೀಲಾ ಪಾತ್ರದಲ್ಲಿ ನಟಿಸಿರುವುದು ಬಾಲಿವುಡ್ ಹಾಟ್ ರಿಚಾ ಚಡ್ಡಾ. 16 ವರ್ಷದವಳಿದ್ದಾಗ ಚಿತ್ರರಂಗಕ್ಕೆ ಬಂದ ಶಕೀಲಾ ಸಾಫ್ಟ್ ಪೋರ್ನ್ ಚಿತ್ರಗಳಲ್ಲಿ ಸ್ಟಾರ್ ನಟಿಯಾದರು. ಆದರೆ.. ಶಕೀಲಾ ಅಂದರೆ ಅಷ್ಟೇ ಅಲ್ಲ. ಆಕೆ ಸಾಕಿದ್ದು 6 ಜನ ಸೋದರಿಯರ ಕುಟುಂಬವನ್ನು. ಆಕೆಗೂ ಪ್ರೀತಿಯಾಯಿತು. ವಂಚನೆಯೂ ಆಯಿತು. ಆಕೆಯಿಂದ ಬದುಕು ಕಟ್ಟಿಕೊಂಡವರೇ, ಆಕೆಯನ್ನು ದೂರವಿಟ್ಟರು. ಯಶಸ್ಸಿನ ಉತ್ತುಂಗ ಮತ್ತು ಮೋಸದ ಬದುಕು ಎರಡೂ ಇರುವ ಶಕೀಲಾ, ಮತ್ತೆ ಮತ್ತೆ ಬದುಕು ಕಟ್ಟಿಕೊಂಡ ಕಥೆಯೇ ಶಕೀಲಾ ಸಿನಿಮಾ. ಇಷ್ಟೆಲ್ಲ ಕಥೆ ಇರುವ ಶಕೀಲಾ ಚಿತ್ರ ಇದೇ ಕ್ರಿಸ್ಮಸ್ ದಿನ ತೆರೆಗೆ ಬರುತ್ತಿದೆ.