ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ತೆಲುಗು ನಟ ವಿಜಯ್ ರಂಗರಾಜು, ಕಣ್ಣೀರು ಹಾಕುತ್ತಾ.. ಕೈಮುಗಿದು.. ತಲೆಬಗ್ಗಿಸಿ ಕ್ಷಮೆ ಕೇಳಿದ್ದಾರೆ. ನಾನು ದೊಡ್ಡ ತಪ್ಪು ಮಾಡಿದ್ದೇನೆ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ. ನನಗೆ ಕೊರೋನಾ ಬಂದಿದೆ ಅದಕ್ಕೆ ಮಾಸ್ಕ್ ಹಾಕಿಕೊಂಡಿದ್ದೇನೆ ನಿಮಗೆ ಮುಖ ತೋರಿಸಬಾರದು ಅಂತ ಅಲ್ಲ. ನಾನು ಆ ದಿನ ನಾನು ವಿಷ್ಣು ಅವರ ಕೊರಳಪಟ್ಟಿ ಹಿಡಿಯಲೂ ಇಲ್ಲ.
ಹಾಗೇನಾದರೂ ಆಗಿದ್ದರೆ, ಯುನಿಟ್ ಹುಡುಗರು ಅವತ್ತೇ ಸಾಯಿಸಿಬಿಡ್ತಾ ಇದ್ರು. ಏನೋ ಫ್ಲೋನಲ್ಲಿ ಹೇಳಿಬಿಟ್ಟೆ, ನನ್ನನ್ನು ಬಿಟ್ಟುಬಿಡಿ, ಪ್ರತಿಯೊಬ್ಬರಿಗೂ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ ಎಂದು ಅಂಗಲಾಚಿದ್ದಾರೆ. ವಿಷ್ಣು ಅಭಿಮಾನಿಗಳು, ಪುನೀತ್, ಸುದೀಪ್, ಉಪೇಂದ್ರ ಹಾಗೂ ಭಾರತಿ ವಿಷ್ಣುವರ್ಧನ್ ಅವರಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ, ಕನ್ನಡ ಚಲನಚಿತ್ರ ಕಲಾವಿದರ ಸಂಘ ಆತನ ಕ್ಷಮೆಯನ್ನು ಸ್ವೀಕರಿಸಲು ಸಿದ್ಧವಿಲ್ಲ.
ಆತನಿಗೆ ತೆಲುಗು ಚಿತ್ರರಂಗದಲ್ಲಿ ನೀಡಿರುವ ಎಲ್ಲ ಸೌಲಭ್ಯಗಳನ್ನೂ ವಾಪಸ್ ಪಡೆಯಬೇಕು. ಆತನ ಸದಸ್ಯತ್ವವನ್ನು ರದ್ದು ಮಾಡಬೇಕು. ಆತನಿಗೆ ಯಾರೂ ಅವಕಾಶ ಕೊಡಬಾರದು. ಆತನನ್ನು ತೆಲುಗು ಚಿತ್ರರಂಗದಿಂದಲೇ ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್.
ಈ ಕುರಿತು ತೆಲುಗು ಚಲನಚಿತ್ರ ಕಲಾವಿದರ ಸಂಘಕ್ಕೆ ಪತ್ರ ಬರೆಯುವುದಾಗಿ ತಿಳಿಸಿರುವ ರಾಕ್ಲೈನ್, ಈ ಕುರಿತು ಈಗಾಗಲೇ ತೆಲುಗು ಚಿತ್ರರಂಗದ ಕೆಲವರ ಜೊತೆ ಮಾತುಕತೆಯನ್ನೂ ಆಡಿದ್ದಾರೆ. ಈತನಿಂದ ಎರಡು ಚಿತ್ರರಂಗಗಳ ನಡುವಿನ ಬಾಂಧವ್ಯಕ್ಕೂ ಧಕ್ಕೆ ಎಂದಿರುವ ರಾಕ್ಲೈನ್ ವೆಂಕಟೇಶ್, ಇಂತಹವರು ಕ್ಷಮೆಗೂ ಅರ್ಹರಲ್ಲ. ಅವರನ್ನು ಕಲಾವಿದರ ವ್ಯಾಪ್ತಿಯಿಂದಲೇ ಹೊರಹಾಕಬೇಕು ಎಂದಿದ್ದಾರೆ.