ನನ್ನ ಜೀವನ ಕಥೆಯೇ ಸಿನಿಮಾ ಆಗುತ್ತಿದೆ. ಒಬ್ಬ ವ್ಯಕ್ತಿಯ ಬದುಕು ಸಿನಿಮಾ ಆಗುವುದು ಸಣ್ಣ ವಿಷಯವೇನಲ್ಲ. ಆ ಖುಷಿ ನನಗಿದೆ. ಆದರೆ ಜೊತೆಯಲ್ಲೇ ನನ್ನವರು ಎನಿಸಿಕೊಂಡವರೊಬ್ಬರೂ ನನ್ನ ಜೊತೆಗಿಲ್ಲ ಎಂಬ ಕೊರಗೂ ಇದೆ..
ಹೀಗೆ ಮಾತನಾಡುತ್ತಾ ಹೋದರು ಶಕೀಲಾ. ಅವರ ಖುಷಿಗೆ ಕಾರಣವಿತ್ತು. ಇಂದ್ರಜಿತ್ ಲಂಕೇಶ್, ಶಕೀಲಾ ಅವರ ಜೀವನ ಚರಿತ್ರೆಯನ್ನೇ ಸಿನಿಮಾ ಮಾಡಿದ್ದಾರೆ. ಟೀಸರ್ ರಿಲೀಸ್ ಮಾಡಿದ್ದಾರೆ. ಕ್ರಿಸ್ಮಸ್ಗೆ ರಿಲೀಸ್ ಕೂಡಾ ಆಗುತ್ತಿದೆ. ಆದರೆ.. ಶಕೀಲಾ ಒಬ್ಬಂಟಿ.
ಒಬ್ಬ ಅಕ್ಕ ನಾನು ದುಡಿದದ್ದನ್ನೆಲ್ಲ ದೋಚಿಕೊಂಡು ಹೋದಳು. ಅವಳ ಜೊತೆ ಮಾತು ಬಿಟ್ಟಿದ್ದೇನೆ. ಇವತ್ತಿಗೂ ಅವಳು ನನ್ನ ದುಡ್ಡಿನಲ್ಲೇ ಬದುಕುತ್ತಿದ್ದಾಳೆ. ಇನ್ನೊಬ್ಬ ತಮ್ಮ. ನಾನು ಚೆನ್ನಾಗಿ ದುಡಿಯುತ್ತಿದ್ದಾಗ ನನ್ನಿಂದ ಎಲ್ಲ ಸಹಾಯವನ್ನೂ ಪಡೆದುಕೊಂಡ. ಈಗ ಅವನೂ ಜೊತೆಗಿಲ್ಲ. ಒಂದು ಫೋನ್ ಮಾಡಿ ಹೇಗಿದ್ದೀಯ ಎಂದು ವಿಚಾರಿಸೋದಿಲ್ಲ.. ಹೀಗೆ ಹೇಳುವಾಗ ಶಕೀಲಾ ಮುಖದಲ್ಲೊಂದು ನೋವಿತ್ತು. ಆದರೆ.. ಕಷ್ಟ ಹೇಳುತ್ತಲೇ ನಾನು ಈಗಲೂ ಸ್ಟ್ರಾಂಗ್ ಎಂದು ತೋರಿಸಿಕೊಳ್ಳೋ ಹಂಬಲವೂ ಇತ್ತು.
ನನ್ನದೊಂದು ಪುಟ್ಟ ಮನೆಯಿದೆ. ಬಂಗಲೆಯೇನಲ್ಲ. ಅಲ್ಲಿ ನಾನೇ ರಾಣಿ.. ನಾನೇ ಮಂತ್ರಿ.. 10ನೇ ಕ್ಲಾಸಿನಲ್ಲಿ ಮನೆಯವರಿಗಾಗಿ ದುಡಿಯೋಕೆ ಶುರು ಮಾಡಿದವಳು. ಈಗ ನನಗಾಗಿ ನಾನು ದುಡಿಯುತ್ತಿದ್ದೇನೆ ಎನ್ನುವಾಗ ಇದ್ದದ್ದು ಬೇಸರವೋ.. ಹತಾಶೆಯೋ.. ನೋವೋ.. ಗೊತ್ತಾಗುವಂತಿರಲಿಲ್ಲ.
ಸದ್ಯಕ್ಕೆ ಶಕೀಲಾ ಕೂಡಾ ಕ್ರಿಸ್ಮಸ್ ದಿನ ರಿಲೀಸ್ ಆಗುವ ಶಕೀಲಾ ಸಿನಿಮಾಗಾಗಿ ಕಾಯುತ್ತಿದ್ದಾರೆ.