ಕೊರೊನಾದಿಂದಾಗಿ ಥಿಯೇಟರುಗಳು ಓಪನ್ ಆಗುತ್ತಿಲ್ಲ. ಈ ವರ್ಷವಂತೂ ಸಿನಿಮಾ ಟಾಕೀಸ್ ನಡೆಯುವ ಯಾವುದೇ ಲಕ್ಷಣಗಳೂ ಇಲ್ಲ. ಹೀಗಾಗಿ ದೊಡ್ಡ ದೊಡ್ಡ ನಿರ್ಮಾಪಕರು ಓಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ, ತಮಿಳಿನಲ್ಲಿ ಸೂರ್ಯ ಮೊದಲಾದವರು ಓಟಿಟಿಗೆ ಬಂದಿದ್ದಾಗಿದೆ. ಕನ್ನಡದಲ್ಲಿ ಆ ಸಾಹಸ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.
ಈಗ ಪುನೀತ್ ಬೆನ್ನಲ್ಲೇ ಕನ್ನಡದ ಸ್ಟಾರ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಅದೇ ಹಾದಿ ಹಿಡಿದಿದ್ದಾರೆ. ಪುಷ್ಕರ್ ಬ್ಯಾನರಿಗೆ ಭೀಮಸೇನ ನಳಮಹರಾಜ ಸಿನಿಮಾ ಈಗ ಓಟಿಟಿಯಲ್ಲೇ ರಿಲೀಸ್ ಆಗುತ್ತಿದೆ. ಅರವಿಂದ್ ಅಯ್ಯರ್, ಆರೋಹಿ ನಾರಾಯಣ್ (ದೃಶ್ಯ ಖ್ಯಾತಿ) ನಿರ್ಮಾಣದ ಚಿತ್ರಕ್ಕೆ ಕಾರ್ತಿಕ್ ಸರಗೂರು ನಿರ್ದೇಶಕ. ಎಲ್ಲವೂ ಪ್ಲಾನ್ ಪ್ರಕಾರವೇ ನಡೆದರೆ ಇನ್ನೊಂದು ತಿಂಗಳಲ್ಲಿ ಭೀಮಸೇನ ನಳಮಹರಾಜ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಬರಲಿದೆ.