ರಮ್ಯಾ ಸ್ಯಾಂಡಲ್‍ವುಡ್‍ನ ಮೋಹಕ ತಾರೆ. ಇವತ್ತಿಗೂ ನಟಿ ರಮ್ಯಾಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇನ್ನು ರಾಜಕೀಯಕ್ಕೆ ಕಾಲಿಟ್ಟು ಸಂಚಲನ ಸೃಷ್ಟಿಸಿದ್ದ ರಮ್ಯಾ, ಮಿಂಚಿನಂತೆ ಹೊಳೆದಿದ್ದರು. ಆದರೆ, ಅಷ್ಟೇ ವೇಗದಲ್ಲಿ ಬಿರುಗಾಳಿಯಂತೆ ಎದ್ದು ತಣ್ಣಗಾಗಿ ಹೋಗಿರುವ ರಮ್ಯಾ, ಈಗ ರಾಜಕೀಯ ಮತ್ತು ಸಿನಿಮಾ ಎರಡೂ ಬೇಡ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ.
ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ರಮ್ಯಾ ``ನನಗೆ ಸಿನಿಮಾ ಮತ್ತು ರಾಜಕೀಯ ಎರಡೂ ಸಾಕಾಗಿದೆ. ಒಂಟಿಯಾಗಿದ್ದಾಗ ನನ್ನನ್ನು ನಾನು ಕಂಡುಕೊಂಡಿದ್ದೇನೆ. ನಾನು ಅಂತರ್ಮುಖಿ. ಹೀಗಾಗಿ ಜನರೊಂದಿಗೆ ಒಡನಾಟ ಇರುವಂತ ವೃತ್ತಿ ನನಗೆ ಸೆಟ್ ಆಗಲ್ಲ. ನಾನು ನಟಿ ಹಾಗೂ ರಾಜಕಾರಣಿ, ಎರಡನ್ನೂ ಬಯಸಿ ಆಗಲಿಲ್ಲ. ಅವುಗಳಿಂದ ದೂರವಾದ ಮೇಲೆ ಖುಷಿಯಾಗಿದ್ದೇನೆ' ಎಂದಿದ್ದಾರೆ ರಮ್ಯಾ.
3 ವರ್ಷಗಳ ವೇದಾಂತ ಕೋರ್ಸ್‍ಗೆ ಸೇರಿಕೊಂಡಿರುವ ರಮ್ಯಾ, ಕೆಲವೇ ತಿಂಗಳಲ್ಲಿ ಮೊದಲ ಸ್ಟೇಜ್ ದಾಟಲಿದ್ದಾರೆ. ಕಾಲೇಜು ದಿನಗಳಲ್ಲಿ ಇಷ್ಟಪಟ್ಟು ಮಾಡುತ್ತಿದ್ದ ಪೇಂಟಿಂಗ್‍ನ್ನು ಮತ್ತೆ ಮಾಡೋಕೆ ಶುರು ಮಾಡಿದ್ದಾರೆ. ಹಿಂದೂಸ್ತಾನಿ, ಕರ್ಣಾಟಿಕ್ ಮತ್ತು ವೆಸ್ಟರ್ನ್ ಮ್ಯೂಸಿಕ್ ಕೇಳಿಕೊಂಡು ಖುಷಿಯಾಗಿದ್ದಾರೆ.
ನಾನು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ನೀಡಿದ್ದೇ ಹೊರತು, ನನ್ನನ್ನು ತೆಗೆದುಹಾಕಲಿಲ್ಲ. ಈಗಲೂ ನನ್ನ ರಾಜೀನಾಮೆ ಪತ್ರ ನನ್ನ ಬಾಸ್ (ರಾಹುಲ್ ಗಾಂಧಿ) ಬಳಿಯೇ ಇದೆ ಎಂದು ಸ್ಪಷ್ಟಪಡಿಸಿರೋ ರಮ್ಯಾ, ಮತ್ತೆ ರಾಜಕೀಯಕ್ಕೆ ಬರಲ್ಲ ಎಂದಿದ್ದಾರೆ.