ಕಪಾಲಿ ಥಿಯೇಟರ್ ಇದ್ದ ಜಾಗ ಶಾಪಗ್ರಸ್ಥ ಜಾಗವಾ..? ನಂಬಿಕೆ ಎಂದುಕೊಂಡರೆ ಮಾತ್ರ ನಂಬಿಕೆ. ಏಕೆ ಗೊತ್ತೆ..? ಇದೇ ಜಾಗದಲ್ಲಿ ಅನಾಹುತಗಳ ಮೇಲೆ ಅನಾಹುತಗಳು ನಡೆಯುತ್ತಿವೆ. ಕಪಾಲಿ ಥಿಯೇಟರ್ ಇದ್ದ ಜಾಗ ಸರಣಿ ದುರಂತಗಳಿಗೆ ಸಾಕ್ಷಿಯಾಗಿದೆ.
1983, ಸೆಪ್ಟೆಂಬರ್ 12ರಂದು ಇಲ್ಲಿ ಗಂಗಾರಾಮ್ ಕಟ್ಟಡ ಕುಸಿತ ಸಂಭವಿಸಿತು. ಗಂಗಾರಾಂ ಬಿಲ್ಡಿಂಗ್ ಬಿದ್ದ ದಿನ ಆಗಿನವರಿಗೆ ಈಗಲೂ ಹಸಿ ಹಸಿ ನೆನಪು. ಅದು ಬೆಂಗಳೂರು ಕಂಡ ಅತಿ ದೊಡ್ಡ ಕಟ್ಟಡ ಕುಸಿತ ದುರಂತ.
37 ವರ್ಷದ ಹಿಂದಿನ ಆ ಘಟನೆಯಲ್ಲಿ 123 ಜನ ಸಾವನ್ನಪ್ಪಿದ್ದರು. ಹೆಚ್ಚೂ ಕಡಿಮೆ 200 ಜನ ಗಾಯಗೊಂಡಿದ್ದರು. ಒಂದು ತಿಂಗಳ ಕಾಲ ಅವಶೇಷಗಳ ಅಡಿ ಮೃತದೇಹ, ಗಾಯಾಳುಗಳನ್ನು ಹೊರ ತೆಗೆಯಲಾಗಿತ್ತು.
ಆ ಘಟನೆಯ ಜೊತೆಯಲ್ಲೇ ಕಪಾಲಿ ಥಿಯೇಟರಿನಲ್ಲಿ ಸಂಭವಿಸಿದ್ದು ಕಟೌಟ್ ದುರಂತ. ಭಕ್ತ ಪ್ರಹ್ಲಾದ ಚಿತ್ರಕ್ಕೆ ಹಾಕಲಾಗಿದ್ದ ಅಣ್ಣಾವ್ರ ಹಿರಣ್ಯ ಕಶಿಪುಪಾತ್ರದ ಕಟೌಟ್ ಬಿದ್ದು, ಇಬ್ಬರು ಮೃತಪಟ್ಟಿದ್ದರು. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಫ್‍ಕೋರ್ಸ್ ಇದಕ್ಕೆ ಕಾರಣವಾಗಿದ್ದು ಎಂಟು ಅಂತಸ್ತಿನ ಗಂಗಾರಾಮ್ ಕಟ್ಟಡದ ಒಂದು ಭಾಗ ಕಪಾಲಿ ಥಿಯೇಟರಿಗೆ ಬಿದ್ದಾಗ.
ಈಗ ಈ ಎರಡು ಕಟ್ಟಡ ದುರಂತ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ದುರಂತಕ್ಕೆ ಕಾರಣ ಇಷ್ಟೆ, ನೆಲ ಮಹಡಿಯ ಪಾರ್ಕಿಂಗ್‍ಗೆ ಬಿಬಿಎಂಪಿ ಅನುಮತಿ ಕೊಟ್ಟಿದ್ದಕ್ಕಿಂತಲೂ 50 ಅಡಿ ಹೆಚ್ಚು ಆಳಕ್ಕೆ ಗುಂಡಿ ತೋಡಿದ್ದು. ದೊಡ್ಡ ಕಟ್ಟಡ ಕಟ್ಟುವ ಕನಸಿನವರ ಸಣ್ಣ ಸಣ್ಣ ದುರಾಸೆಗಳು ಬೇರೆಯವರ ಕನಸುಗಳಿಗೆ ಸಮಾಧಿ ಕಟ್ಟುತ್ತವೆ ಅನ್ನೋದಕ್ಕೆ ಇದೇ ಸಾಕ್ಷಿ.