ಡಾ.ರಾಜ್ ಕುಮಾರ್ ಮೊಮ್ಮಗಳು, ನಟ ರಾಮ್‍ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್ ಅಭಿನಯಿಸುತ್ತಿರುವ ಮೊದಲ ಚಿತ್ರ ನಿನ್ನ ಸನಿಹಕೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರವಿದು. ಈಗ ಚಿತ್ರದ ನಿರ್ದೇಶಕರು ಬದಲಾಗಿದ್ದಾರೆ. ಚಿತ್ರದ ನಾಯಕ ನಟ ಸೂರಜ್ ಗೌಡ ಅವರೇ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸುಮನ್ ಜಾದೂಗಾರ್ ನಿರ್ದೇಶನದಿಂದ ಹಿಂದೆ ಸರಿದಿದ್ದಾರೆ.
ಸಾಮಾನ್ಯವಾಗಿ ನಿರ್ದೇಶಕರು ಈ ರೀತಿ ಬದಲಾದರೆ, ಅದು ಚಿತ್ರತಂಡ, ನಾಯಕ ನಟರ ಜೊತೆ ವಿವಾದ, ವಾಗ್ವಾದವೇ ಕಾರಣ ಎನ್ನುವುದು ಗಾಂಧಿ ನಗರದ ನಂಬಿಕೆ. ಅದು ಸತ್ಯವೂ ಹೌದು. ಆದರೆ, ಈ ಬಾರಿ ಹಾಗಾಗಿಲ್ಲ. ನಿರ್ದೇಶಕ ಸುಮನ್ ಜಾದೂಗಾರ್ ಸ್ವತಃ ನಿರ್ದೇಶನದ ಹೊಣೆಯನ್ನು ನಾಯಕ ನಟ ಸೂರಜ್ ಗೌಡ ಅವರಿಗೆ ವಹಿಸಿದ್ದಾರೆ.
ಆಕ್ಸಿಡೆಂಟ್ ಆದ ಕಾರಣದಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೂರಜ್ ಗೌಡ ಅವರಿಗೇ ಜವಾಬ್ದಾರಿ ನೀಡಿದ್ದೇನೆ. ವಿವಾದವೇನಿಲ್ಲ. ಚಿತ್ರದ ಕಥೆಯೂ ಸೂರಜ್ ಗೌಡ ಅವರದ್ದೇ ಆಗಿರೋ ಕಾರಣ, ಅವರಿಗೆ ಇದು ಸುಲಭವಾಗಿದೆ ಎಂದಿದ್ದಾರೆ ಸುಮನ್.
ನಾನು ನಿರ್ದೇಶನ ಮಾಡುತ್ತಿಲ್ಲ. ಆದರೆ, ಚಿತ್ರತಂಡದ ಜೊತೆ ಇದ್ದೇ ಇದ್ದೇನೆ. ವಿವಾದ ಮಾಡಿಕೊಂಡಿರೋದೆಲ್ಲ ಸುಳ್ಳು ಎಂದಿದ್ದಾರೆ ಸುಮನ್.