ಕಿಚ್ಚ ಸುದೀಪ್ ಮತ್ತೊಮ್ಮೆ ಸದ್ದಿಲ್ಲದೇ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಅಸಹಾಯಕ ಕಲಾವಿದರು, ತಂತ್ರಜ್ಞರಿಗೆ ನೆರವು ನೀಡಿದ್ದ ಸುದೀಪ್, ಅದಾದ ನಂತರ ತಂದೆಯನ್ನು ಕಳೆದುಕೊಂಡಿದ್ದ ಯುವತಿಯೊಬ್ಬಳ ಮದುವೆ ಮಾಡಿಸಿದ್ದರು. ಇನ್ನೂ ಕೆಲವು ಬಹಿರಂಗವಾಗಿಲ್ಲ. ಈಗ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಜ್ಜೆಯಿಟ್ಟಿದ್ದಾರೆ ಸುದೀಪ್.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆಯಲ್ಲಿ 4 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿದ್ದಾರೆ. ಶಾಲೆಯ ಶಿಕ್ಷಕರ ಸಂಬಳ ಮತ್ತು ಸ್ಕಾಲರ್ ಶಿಪ್ ಬಿಟ್ಟು, ಉಳಿದೆಲ್ಲ ಹೊಣೆ ಸುದೀಪ್ ಅವರ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯದ್ದು. ಶಾಲೆಯ ಅಭಿವೃದ್ಧಿ ಮಾಡುವುದಷ್ಟೇ ಅಲ್ಲದೆ, ಕಂಪ್ಯೂಟರ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದೂ ಸುದೀಪ್ ಅವರ ಟ್ರಸ್ಟ್‍ನ ಗುರಿ. ಮಾರ್ಚ್ ತಿಂಗಳಲ್ಲಿಯೇ ಕೆಲಸ ಶುರುವಾಗಿತ್ತಾದರೂ, ಕೊರೊನಾ ಕಾರಣ ಬ್ರೇಕ್ ಬಿದ್ದಿತ್ತು.