ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣ, ಅವರ ಕುಟುಂಬವನ್ನಷ್ಟೇ ಅಲ್ಲ, ಚಿತ್ರೋದ್ಯಮಿಗಳನ್ನೂ ಕಂಗೆಡಿಸಿರುವುದು ಸತ್ಯ. ಏಕೆಂದರೆ, ಚಿರು ಕೈತುಂಬಾ ಚಿತ್ರಗಳನ್ನಿಟ್ಟುಕೊಂಡಿದ್ದರು. ಕೆಲವು ಚಿತ್ರಗಳು ಚಿತ್ರೀಕರಣ ಮುಗಿಸಿದ್ದರೆ, ಇನ್ನೂ ಕೆಲವು ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದವು. ಸಮಸ್ಯೆಯಾಗಿರುವುದು ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‍ನಲ್ಲಿರೋ ಚಿತ್ರಗಳಿಗೆ.
ರಾಮ್‍ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಚಿತ್ರದ ಚಿತ್ರೀಕರಣ ಮುಗಿದು ಎಡಿಟಿಂಗ್ ಟೇಬಲ್ ಮೇಲಿತ್ತು. ಡಬ್ಬಿಂಗ್ ಬಾಕಿಯಿತ್ತು. ಈಗ ಚಿರು ಇಲ್ಲ. ಹೀಗಾಗಿ ಅಣ್ಣನ ಪಾತ್ರಕ್ಕೆ ಸ್ವತಃ ಡಬ್ಬಿಂಗ್ ಮಾಡಲು ಒಪ್ಪಿಕೊಂಡಿದ್ದಾರೆ ಧ್ರುವ ಸರ್ಜಾ.
ಈ ಹಿಂದೆ ಶಂಕರ್ ನಾಗ್ ಅಕಾಲಿಕ ಸಾವಿಗೀಡಾದಾಗಲೂ ಹೀಗೆಯೇ ಆಗಿತ್ತು. ಆಗ ಶಂಕರ್ ಅಭಿನಯಿಸಿದ್ದ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದ ನಿಗೂಢ ರಹಸ್ಯ ಮತ್ತು ಸುಂದರ ಕಾಂಡ ಚಿತ್ರಗಳನ್ನು ಅಣ್ಣ ಅನಂತ್ ನಾಗ್ ಮುಗಿಸಿಕೊಟ್ಟಿದ್ದರು. ಈಗ ಧ್ರುವ ಸರ್ಜಾ.
ಅತ್ತ ತಮ್ಮ ಅಭಿನಯದ ಪೊಗರು ಚಿತ್ರದ ಬ್ಯುಸಿ ಶೆಡ್ಯೂಲ್ ನಡುವೆಯೇ ಅಣ್ಣನ ಚಿತ್ರಗಳ ಡಬ್ಬಿಂಗ್ ಮುಗಿಸಿಕೊಡಲು ಒಪ್ಪಿಕೊಂಡಿದ್ದಾರೆ ಧ್ರುವ.