ನೀವು ಈ ಚಿತ್ರ ರಿಲೀಸ್ ಆದ ಮೇಲೆ ಹಾಡಿನ ದೃಶ್ಯ ನೋಡುತ್ತೀರಿ. ಅಲ್ಲಿ ಹಿಮಾಲಯದಲ್ಲಿ ನಾಯಕ, ನಾಯಕಿ ಹಾಡುತ್ತಿರುತ್ತಾರೆ. ಬ್ಯಾಕ್‍ಗ್ರೌಂಡ್‍ನಲ್ಲಿ 150ಕ್ಕೂ ಹೆಚ್ಚು ಡ್ಯಾನ್ಸರ್ಸ್ ಇರುತ್ತಾರೆ. ಕೊರೊನಾ ನಿರ್ಬಂಧ ಇರುವಾಗ ಈ ಹಾಡನ್ನು ಹೇಗೆ ಶೂಟ್ ಮಾಡಿದರು. ಇವರು ಯಾವಾಗ ಹಿಮಾಲಯಕ್ಕೆ ಹೋದರು ಎಂದು ತಲೆಕೆಡಿಸಿಕೊಳ್ಳಬೇಡಿ. ನಿರ್ದೇಶಕ ಪವನ್ ಒಡೆಯರ್ ಟೆಕ್ನಾಲಜಿ ಮೊರೆ ಹೋಗಿದ್ದಾರೆ. 360 ಡಿಗ್ರಿ ಗ್ರಾಫಿಕ್ಸ್ ಟೆಕ್ನಾಲಜಿ ಬಳಸಿಕೊಳ್ಳುತ್ತಿದ್ದಾರೆ.
ಗ್ರೀನ್ ಮ್ಯಾಟ್‍ನಲ್ಲಿ ಹಿಮಾಲಯ ಸೃಷ್ಟಿಸುತ್ತೇವೆ. 50 ಡ್ಯಾನ್ಸರ್‍ಗಳಿಗೆ ಮೂರು ಮೂರು ಕಾಸ್ಟ್ಯೂಮ್ ಬಳಸುತ್ತೇವೆ. ಅವರನ್ನೇ 150 ಜನರಂತೆ ರೀ-ಕ್ರಿಯೇಟ್ ಮಾಡುತ್ತೇವೆ. ಚಿತ್ರದ ಹೀರೋ ರ್ಯಾಪ್ ಸಿಂಗರ್. ಹೀಗಾಗಿ ದೃಶ್ಯಗಳಲ್ಲಿ ಹೆಚ್ಚು ಜನರನ್ನು ತೋರಿಸಲೇಬೇಕಿದೆ. ಅದಕ್ಕಾಗಿ ಈ ಸಾಹಸ ಮಾಡುತ್ತಿದ್ದೇವೆ. ನನ್ನ ಮತ್ತು ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಹಾಗೂ ಸಿನಿಮಾಟೋಗ್ರಾಫರ್ ವೈದಿ ಮುಂದೆ ದೊಡ್ಡ ಸವಾಲಿದೆ ಎನ್ನುತ್ತಾರೆ ಪವನ್.
ಆಕ್ಚುಯಲಿ ಹೊರಾಂಗಣ ಚಿತ್ರೀಕರಣಕ್ಕಿಂತ ಗ್ರಾಫಿಕ್ಸ್ ಚಿತ್ರೀಕರಣಕ್ಕೆ ಹೆಚ್ಚು ವೆಚ್ಚವಾಗಲಿದೆಯಂತೆ. ಆದರೆ ಹಣ ಹೆಚ್ಚು ಖರ್ಚಾದರೂ ಪರವಾಗಿಲ್ಲ. ರಿಸ್ಕ್ ಬೇಡ ಎಂದಿದ್ದಾರಂತೆ ನಿರ್ಮಾಪಕ ಸಿ.ಆರ್. ಮನೋಹರ್. ಇಶಾನ್ ಮತ್ತು ಅಶಿಕಾ ರಂಗನಾಥ್ ನಟಿಸಿರುವ ಚಿತ್ರಕ್ಕೆ ಅಂತಿಮ ಹಂತದ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ.