ಚಿತ್ರಲೋಕ ಡಾಟ್ ಕಾಮ್. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ನಿಮ್ಮ ಚಿತ್ರಲೋಕಕ್ಕೆ ಪ್ರತ್ಯೇಕ ಸ್ಥಾನಮಾನವಿದೆ. ವಿಶೇಷ ಹೆಜ್ಜೆಗುರುತುಗಳಿವೆ. ಆ ಹೆಜ್ಜೆಗಳು ಒಂದು ನೂರಾಗಿ.. ಸಾವಿರವಾಗಿ.. ಈಗ 21ನೇ ವರ್ಷದ ಸಂಭ್ರಮದಲ್ಲಿ ನಿಂತಿವೆ.
ಚಿತ್ರಲೋಕ ವೆಬ್‍ಸೈಟ್ ಹುಟ್ಟಿದಾಗ ಭಾರತಕ್ಕಿನ್ನೂ ಗೂಗಲ್ ಕಾಲಿಟ್ಟಿರಲಿಲ್ಲ. ಇಂಟರ್‍ನೆಟ್ ಅನ್ನೋದು ಯಾವುದೋ ಲೋಕದ ಸುಂದರ ಕಲ್ಪನೆಯಾಗಿಯೇ ಉಳಿದಿದ್ದ ಕಾಲವದು. ಅಂತಹ ಕಾಲದಲ್ಲಿ ಉದ್ಭವವಾದ ಚಿತ್ರಲೋಕ, ಇವತ್ತಿಗೂ ಕನ್ನಡ ಚಿತ್ರರಂಗದ ನಂ.1 ಸಿನಿಮಾ ವೆಬ್‍ಸೈಟ್.
ಇಡೀ ಜಗತ್ತು ವೈ2ಕೆ ಸಮಸ್ಯೆಯಲ್ಲಿ ತೊಳಲಾಡುತ್ತಿರುವಾಗ, 2000 ಇಸವಿಯ ಸೊನ್ನೆಗಳೇ ಇಂಟರ್‍ನೆಟ್‍ನ್ನು ಮುಗಿಸಿಬಿಡುತ್ತವೆ ಎಂಬ ಆತಂಕದಲ್ಲಿದ್ದಾಗ ಹುಟ್ಟಿಕೊಂಡ ವೆಬ್‍ಸೈಟ್ ಚಿತ್ರಲೋಕ. 2000ನೇ ಇಸವಿಯ ಜೂನ್ 26ರಂದು ಪಾರ್ವತಮ್ಮ ರಾಜ್‍ಕುಮಾರ್ ಉದ್ಘಾಟಿಸಿದ ವೆಬ್‍ಸೈಟ್ ಇದು. 21ನೇ ಶತಮಾನದ ಆರಂಭದ ವರ್ಷ ಹುಟ್ಟಿದ ವೆಬ್‍ಸೈಟ್`ಗೀಗ 21ನೇ ವರ್ಷದ ಸಂಭ್ರಮ.
ಈ 20 ವರ್ಷಗಳಲ್ಲಿ ಚಿತ್ರಲೋಕ 2 ಬಾರಿ ಲಿಮ್ಕಾ ದಾಖಲೆ ಪುಸ್ತಕ ದಾಖಲೆ ಬರೆದಿದೆ. ಚಿತ್ರರಂಗಕ್ಕೆ ಅಗತ್ಯ ಬಿದ್ದಾಗಲೆಲ್ಲ ಚಿತ್ರಲೋಕ ಜೊತೆಗೆ ನಿಂತಿದೆ. ಚಿತ್ರರಂಗವೂ ಅಷ್ಟೆ.. ಚಿತ್ರಲೋಕವನ್ನು ಪ್ರೀತಿ, ಅಕ್ಕರೆಯಿಂದ ಬೆಳೆಸಿದೆ. ಇದೆಲ್ಲದರ ಜೊತೆಗೆ ನೀವು. ಚಿತ್ರಲೋಕದ ಓದುಗರು ಮತ್ತು ನೋಡುಗರು. ಚಿತ್ರಲೋಕ ಸೋಷಿಯಲ್ ಮೀಡಿಯಾ ಪ್ಲಾಟ್‍ಫಾರ್ಮಿನಲ್ಲೂ ಭದ್ರವಾದ ಹೆಜ್ಜೆಗಳನ್ನೂರಿದೆ.
ಚಿತ್ರಲೋಕದ ಈ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತ ಚಿತ್ರರಂಗದ ಎಲ್ಲ ಸಂಘ, ಸಂಸ್ಥೆಗಳು, ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಪ್ರದರ್ಶಕರು, ಜಾಹೀರಾತುದರರು, ಸ್ನೇಹಿತರು ಮತ್ತು ವಿಶೇಷವಾಗಿ ಓದುಗರು ಮತ್ತು ನೋಡುಗರು.. ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ. ಇನ್ನಷ್ಟು ಹೊಸ ಹೊಸ ಹೆಜ್ಜೆಗಳನ್ನಿಡುವ ಕನಸಿನೊಂದಿಗೆ, ಗುರಿಯೊಂದಿಗೆ ಚಿತ್ರಲೋಕ ಮುನ್ನಡೆಯುತ್ತಿದೆ.
ಇಂತಿ ನಿಮ್ಮವ
ಕೆ.ಎಂ.ವೀರೇಶ್
ಸಂಪಾದಕರು
ಚಿತ್ರಲೋಕ