ಚಿರಂಜೀವಿ ಸರ್ಜಾ ಸಾವು ಅನಿರೀಕ್ಷಿತ ಆಘಾತ. ಏಕೆಂದರೆ ಚಿರಂಜೀವಿ ಸರ್ಜಾ ಫಿಟ್ ಆಗಿದ್ದರು. ವ್ಯಾಯಾಮ ನಿರಂತರವಾಗಿತ್ತು. ವಯಸ್ಸು ಜಸ್ಟ್ 39 ವರ್ಷ. ಹಾಗಾದರೆ ಇದ್ದಕ್ಕಿದ್ದಂತೆ ಸಾವು ಸುತ್ತಿಕೊಂಡಿದ್ದು ಹೇಗೆ..? ಡಾಕ್ಟರ್ ಕೊಟ್ಟಿರೋ ವರದಿಯ ಡೀಟೈಲ್ಸ್ ಹೀಗಿದೆ.
ಚಿರು ಅವರನ್ನು ವೈದ್ಯರು ಆಸ್ಪತ್ರೆಗೆ ಕರೆತಂದಿದ್ದು ಮಧ್ಯಾಹ್ನ 2.20ಕ್ಕೆ. ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಚಿರು ಅವರ ಪಲ್ಸ್ ರೇಟ್ ಡೌನ್ ಆಗಿತ್ತು. ಹೀಗಾಗಿ ಆಸ್ಪತ್ರೆಗೆ ಕರೆತಂದ ತಕ್ಷಣ ಅವರನ್ನು ಎಮರ್ಜೆನ್ಸಿ ರೂಂಗೆ ಶಿಫ್ಟ್ ಮಾಡಲಾಯ್ತು. ತಕ್ಷಣ ಅವರನ್ನು ಟ್ರಿಯೇಜ್ ಏರಿಯಾಗೆ ಶಿಫ್ಟ್ ಮಾಡಲಾಯ್ತು. ಟ್ರಿಯೇಜ್ ಏರಿಯಾ ಅಂದ್ರೆ ಏನ್ ಗೊತ್ತಾ..? ಸಿಂಪಲ್ಲಾಗ್ ಅರ್ಥ ಆಗಬೇಕು, ಆರ್ಮಿಯಲ್ಲಿ ಮೈತುಂಬಾ ಗಾಯಗೊಂಡವರನ್ನ ಒಂದು ರೂಂಗೆ ಶಿಫ್ಟ್ ಮಾಡ್ತಾರೆ. ಅಲ್ಲಿ ಒಬ್ಬ ರೋಗಿಗೆ ಏನೇನೆಲ್ಲ ಸೌಲಭ್ಯ ಕೊಡಲು ಸಾಧ್ಯವಿದೆಯೋ, ಎಲ್ಲ ಸೌಲಭ್ಯಗಳೂ ಅಲ್ಲಿರ್ತವೆ. ಇದು ಆರ್ಮಿಯಿಂದ ಬಂದಿರೋ ಪದ. ಹೀಗಾಗಿ ಹಲವು ಆಸ್ಪತ್ರೆಗಳು ಅದನ್ನು ಟ್ರಿಯೇಜ್ ಏರಿಯಾ ಎಂದೇ ಕರೆಯುತ್ತವೆ. ಅದು ಎಮರ್ಜೆನ್ಸಿ ರೂಂಗಳಲ್ಲಿ ಮಾತ್ರ ಇರುತ್ತೆ. ಅಲ್ಲಿ ಚಿಕಿತ್ಸೆ ನೀಡಲಾಯ್ತು.
ಚಿಕಿತ್ಸೆ ವೇಳೆ ಪಲ್ಸ್ ಬಡಿತ ಹೆಚ್ಚಿಸಲು ಪ್ರಯತ್ನ ಮಾಡಲಾಯ್ತು. ಸಿಪಿಆರ್ ಬಳಸುವ ಮೂಲಕ ನಾಡಿ ಮಿಡಿತವನ್ನು ಹತೋಟಿಯಲ್ಲಿಡಲು ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ. 3 ಗಂಟೆ 48 ನಿಮಿಷದವರೆಗೂ ನಡೆದ ನಿರಂತರ ಪ್ರಯತ್ನದಲ್ಲಿ 3 ಬಾರಿ ನಾಡಿ ಮಿಡಿತ ಹೆಚ್ಚಿಸಲು ಯಶಸ್ವಿಯಾದೆವು. ಆದರೆ ಅದು ಸ್ಥಿರವಾಗಿ ನಿಲ್ಲಲಿಲ್ಲ. 3.48ಕ್ಕೆ ಚಿರಂಜೀವಿ ಸರ್ಜಾ ನಿಧನ ಎಂದು ಘೋಷಿಸಿದೆವು.
ಇದು ಜಯನಗರ ಅಪೋಲೋ ಆಸ್ಪತ್ರೆಯ ಡಾ.ಯತೀಶ್ ಗೋವಿಂದಯ್ಯ ಅವರು ನೀಡಿರುವ ವರದಿ.
ಚಿರುಗೆ ನಿನ್ನೆಯೇ ಎದೆನೋವು ಕಾಣಿಸಿಕೊಂಡಿತ್ತಂತೆ. ಇಸಿಜಿ ಮಾಡಿಸಿಕೊಂಡು ಬಂದಿದ್ದರಂತೆ. ಅಣ್ಣನಿಗೆ ಧ್ರುವ ಸರ್ಜಾ ಮನೆಯಿಂದ ಮಟನ್ ಮಾಡಿಸಿಕೊಂಡು ತಂದಿದ್ದರು. ಚೆನ್ನಾಗಿಯೇ ಊಟವನ್ನೂ ಮಾಡಿದ್ದ ಚಿರು, ಮಧ್ಯಾಹ್ನ ಮಾವ ಅರ್ಜುನ್ ಸರ್ಜಾ ಜೊತೆ ಮಾತನಾಡಿದ್ದರು. ಚೆನ್ನಾಗಿದ್ದೇನೆ ಎಂದು ತಿಳಿಸಿದ್ದರು. ಅಪ್ಪನ ಜೊತೆ ಯಾಕೋ ಸ್ವಲ್ಪ ಬೆವರು ಬರ್ತಿದೆ ಅಪ್ಪಾ, ಫ್ಯಾನ್ ಹಾಕಿ ಎಂದು ಫ್ಯಾನ್ ಹಾಕಿಸಿಕೊಂಡಿದ್ದರು. ಹಾಗೇ ಮಲಗಿದವರು ಮೇಲೇಳಲೇ ಇಲ್ಲ.