ಪ್ರಶಾಂತ್ ನೀಲ್, ಈಗ ಇಂಡಿಯಾದ ಸೆನ್ಸೇಷನಲ್ ಡೈರೆಕ್ಟರ್. ಕೆಜಿಎಫ್ ಅನ್ನೋ ಸಿನಿಮಾ ಪ್ರಶಾಂತ್ ನೀಲ್ಗೆ ಸೃಷ್ಟಿಸಿರೋ ಡಿಮ್ಯಾಂಡು ಅಂತಿಂತಹುದ್ದಲ್ಲ. ಸದ್ಯಕ್ಕೆ ಕೆಜಿಎಫ್ ಚಾಪ್ಟರ್ 2 ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿರೋ ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಜ್ಯೂ. ಎನ್ಟಿಆರ್ ಜೊತೆ ಸಿನಿಮಾ ಮಾಡ್ತಾರಂತೆ, ಮಹೇಶ್ ಬಾಬು ಕಥೆ ಕೇಳಿದ್ದಾರಂತೆ.. ಪ್ರಭಾಸ್ ಕೂಡಾ ಕಥೆ ಕೇಳೋಕೆ ರೆಡಿ ಇದ್ದಾರಂತೆ.. ಅಲ್ಲು ಅರ್ಜುನ್ ಇಂಪ್ರೆಸ್ ಆಗಿದ್ದಾರಂತೆ.. ಹೀಗೆ ಬಂದ ಅಂತೆ ಕಂತೆ ಸುದ್ದಿಗಳೆಲ್ಲ ಟಾಲಿವುಡ್ದ್ದೇ.
ನಾನು ಹೊಸ ಚಿತ್ರವನ್ನು ಕನ್ನಡದಲ್ಲಿಯೇ ಮಾಡ್ತೇನೆ, ಕನ್ನಡ ಬಿಟ್ಟು ಹೋಗಲ್ಲ ಎಂದಿದ್ದರು ಪ್ರಶಾಂತ್ ನೀಲ್. ಆದರೆ ಅವರ ಹುಟ್ಟುಹಬ್ಬದ ದಿನ ಬಂದಿರೋ ಎರಡು ಜಾಹೀರಾತು ಹೊಸ ಪ್ರಶ್ನೆ ಹುಟ್ಟುಹಾಕಿವೆ.
ತೆಲುಗಿನಲ್ಲಿ RRR ಸಿನಿಮಾ ಮಾಡ್ತಿರೋ ಡಿವಿವಿ ಎಂಟರ್ಟೈನ್ಮೆಂಟ್, ಕನ್ನಡದ ಎಲ್ಲ ದಿನಪತ್ರಿಕೆಗಳಲ್ಲಿ ದೊಡ್ಡ ಜಾಹೀರಾತು ನೀಡಿ ಪ್ರಶಾಂತ್ ನೀಲ್ಗೆ ಶುಭ ಕೋರಿದೆ. ಇನ್ನು ತೆಲುಗಿನ ಇನ್ನೊಂದು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಕೂಡಾ ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ದೊಡ್ಡ ಮಟ್ಟದ ಜಾಹೀರಾತು ಕೊಟ್ಟಿದೆ.
ಈ ಎರಡೂ ಸಂಸ್ಥೆಗಳ ಮೂಲ ತೆಲುಗು ನಾಡಿನದ್ದು. ಹಾಗಾದರೆ ಮುಂದಿನ ಚಿತ್ರವನ್ನ ಪ್ರಶಾಂತ್ ನೀಲ್, ತೆಲುಗಿನಲ್ಲಿ ಮಾಡ್ತಾರಾ..? ಅಥವಾ ಆ ಸಂಸ್ಥೆಗಳೇ ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡ್ತವಾ..? ಸಸ್ಪೆನ್ಸ್ ಇನ್ನೂ ಸಸ್ಪೆನ್ಸ್ ಆಗಿಯೇ ಇದೆ.