ಕೋವಿಡ್ ಲಾಕ್ ಡೌನ್ನಿಂದಾಗಿ ದೇಶದಲ್ಲಿ ಎಲ್ಲಿಯೂ ಚಿತ್ರಮಂದಿರಗಳು ಓಪನ್ ಇಲ್ಲ. ಲಾಕ್ ಡೌನ್ ಘೋಷಿಸುವುದಕ್ಕೂ ಮುನ್ನವೇ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. 2 ತಿಂಗಳಿಂದ ಒಂದೇ ಒಂದು ಸಿನಿಮಾ ಇಲ್ಲ. ಹಂತ ಹಂತವಾಗಿ ಲಾಕ್ ಡೌನ್ ತೆರವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳ ಆರಂಭಕ್ಕೆ ಒತ್ತಡ ಕೇಳಿ ಬರೋಕೆ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಜೂನ್ ಮೊದಲ ವಾರ ಚಿತ್ರಮಂದಿರಗಳ ಬಾಗಿಲು ತೆರೆಯುವ ಸಾಧ್ಯತೆಗಳಿವೆ.
ನಿರೀಕ್ಷೆಗೆ ಕಾರಣಗಳೂ ಇವೆ. ವೈರಸ್ ಅಟ್ಟಹಾಸಕ್ಕೆ ನಲುಗಿರುವ ಅಮೆರಿಕದಲ್ಲಿ, ನಾರ್ವೆ, ಚೆಕ್ ರಿಪಬ್ಲಿಕ್ ಮೊದಲಾದೆಡೆ ಚಿತ್ರಮಂದಿರಗಳು ಓಪನ್ ಆಗಿವೆ. ‘ಹಲವು ದೇಶಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದೆ. ನಮ್ಮಲ್ಲಿ ಇನ್ನೊಂದೆರಡು ವಾರದ ನಂತರ ಶುರುವಾಗಬಹುದು. ಸರ್ಕಾರದ ಜೊತೆ ಮಾತುಕತೆಯಲ್ಲಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್, ಒಟ್ಟು ಸಾಮರ್ಥ್ಯದ ಅರ್ಧದಷ್ಟು ಮಾತ್ರ ಟಿಕೆಟ್ ಮಾರಾಟ, ಟಿಕೆಟ್ ಬೆಲೆ ಹೆಚ್ಚಿಸದೇ ಇರುವುದು..ಹೀಗೆ ಹಲವು ನಿರ್ಧಾರ ಕೈಗೊಳ್ಳಲು ಒಪ್ಪಿದ್ದೇವೆ. ನಿರ್ಮಾಪಕರು ಸಿನಿಮಾ ರಿಲೀಸ್ ಮಾಡೋಕೆ ಒಪ್ಪಿದರೆ ನಾವು ರೆಡಿ’ ಎನ್ನುತ್ತಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್.
ಇನ್ನು ಮಲ್ಟಿಪ್ಲೆಕ್ಸ್ ನವರೂ ಕೆಲವು ನಿರ್ಧಾರ ತೆಗೆದುಕೊಂಡಿದ್ದಾರೆ. 2 ಶೋಗಳ ಇಂಟರ್ವೆಲ್ ಒಟ್ಟಿಗೇ ಬರದಂತೆ ಟೈಂ ಮೈಂಟೇನ್ ಮಾಡುವುದು, ಸೀಟಿಂಗ್ ವ್ಯವಸ್ಥೆ ಬದಲಾವಣೆ, ಥರ್ಮಲ್ ಸ್ಕ್ರೀನಿಂಗ್ ಮೊದಲಾದ ಮುಂಜಾಗ್ರತೆ ವಹಿಸಲು ಸಿದ್ಧ ಎನ್ನುತ್ತಿದ್ದಾರೆ ಮಲ್ಟಿಪ್ಲೆಕ್ಸ್ ಮಾಲೀಕರು. ಮುಂದೇನು..? ಜೂನ್‍ನಿಂದ ಸಿನಿಮಾ ಪ್ರದರ್ಶನ ಶುರುವಾಗುತ್ತಾ..?