ಕೋವಿಡ್ 19 ಎಫೆಕ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಬಡ ಕುಟುಂಬಗಳಿಗೆ ನೆರವಾಗುತ್ತಿರುವ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿದೆ. ಕನ್ನಡ ಚಿತ್ರರಂಗದ ನಿರ್ಮಾಪಕರೂ ಹಿಂದೆ ಬಿದ್ದಿಲ್ಲ.
ಮುಗುಳುನಗೆ, ಗೀತಾ.. ದಂತಹ ಹಿಟ್ ಚಿತ್ರಗಳ ನಿರ್ಮಾಪಕ ಸೈಯದ್ ಸಲಾಂ ಬೊಮ್ಮನಹಳ್ಳಿ, ಮಂಗಮ್ಮನಪಾಳ್ಯ, ಎಚ್‍ಎಸ್‍ಆರ್ ಲೇಔಟ್ ಸುತ್ತ ಸಾವಿರಾರು ಜನರಿಗೆ ಆಹಾರ ವಿತರಿಸುತ್ತಿದ್ದಾರೆ. ಸೈಯದ್ ಸಲಾಂ ಅವರ ಜೊತೆ ಕೈ ಜೋಡಿಸಿರುವುದು ಅವರ ಪುತ್ರ ಅಜರ್, ನಿರ್ದೇಶಕ ಸನತ್, ಪ್ರಶಾಂತ್. ಯಾರಿಗೆ ತಲುಪಿಸಬೇಕು ಎಂಬ ವಿವರವನ್ನು ಪೊಲೀಸರಿಂದಲೇ ಪಡೆದು ಸಹಾಯ ಒದಗಿಸುತ್ತಿದ್ದಾರೆ.
ಇನ್ನೊಂದೆಡೆ 100, ಗಾಳಿಪಟ 2 ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ ಚಿತ್ರದುರ್ಗ ಸಮೀಪದ ಹಳ್ಳಿಯೊಂದರ ಜನರಿಗೆ ಒಂದು ತಿಂಗಳ ಸಂಪೂರ್ಣ ದಿನಸಿ ಒದಗಿಸಿದ್ದಾರೆ.
ನಿರ್ಮಾಪಕ ರಘುನಾಥ್ ನೇರವಾಗಿ ಪೊಲೀಸರು, ವೈದ್ಯರು, ಪೌರ ಕಾರ್ಮಿಕರಿಗೆ ಆಹಾರ ಸರಬರಾಜು ಹೊಣೆ ಹೊತ್ತು ನಿಂತಿದ್ದಾರೆ.
ಅತ್ತ ರಾಜ್ಯದ 2ನೇ ಹಾಟ್‍ಸ್ಪಾಟ್ ನಂಜನಗೂಡಿನಲ್ಲಿ ನಿರ್ಮಾಪಕಿ ಶ್ರುತಿ ನಾಯ್ಡು ಡೋರನಕಟ್ಟೆ, ಕೊಟ್ಟನಹಳ್ಳಿ, ಚಿಲಕನಹಳ್ಳಿ ಗ್ರಾಮದ ಸುಮಾರು 200 ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ನೀಡಿದ್ದಾರೆ. ತಮ್ಮ ಹೋಟೆಲ್‍ನಿಂದ ಮೈಸೂರಿನ ಕೆಲವು ವೃದ್ಧಾಶ್ರಮಗಳಿಗೆ ಆಹಾರ ಪೂರೈಸುತ್ತಿದ್ದಾರೆ.