ಸಲಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸಂಜನಾ ಆನಂದ್ ಹೊಸ ಪ್ರತಿಭೆಯೇನೂ ಅಲ್ಲ. ಆದರೆ, ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಕಲಾವಿದೆ. ಹಾಗೆ ನೋಡಿದ್ರೆ ನಿರ್ದೇಶಕರಾಗಿ ಸ್ವತಃ ದುನಿಯಾ ವಿಜಯ್ ಹೊಸಬರೇ. ಸ್ಟಂಟ್ ಕಲಾವಿದನಾಗಿ ಚಿತ್ರರಂಗಕ್ಕೆ ಬಂದು, ಸಣ್ಣ ಪುಟ್ಟ ಸೈಡ್ ರೋಲುಗಳಲ್ಲಿ ನಟಿಸುತ್ತಾ ಹೀರೋ ಆಗಿ ಬೆಳೆದಿರುವ ವಿಜಿಗೆ ತಮ್ಮ ಆರಂಭದ ದಿನಗಳ ಪಡಿಪಾಟಲುಗಳ ಕಾರಣವೋ ಏನೋ.. ಹೊಸಬರ ಮೇಲೆ ಪ್ರೀತಿ ಜಾಸ್ತಿ. ಅದು ಸಲಗ ಚಿತ್ರದಲ್ಲಿ ಎದ್ದು ಕಾಣುತ್ತಿದೆ.
ಈ ಚಿತ್ರದಲ್ಲಿ ಸಿದ್ದಿ ಜನಾಂಗದ ಗೀತಾ ಸಿದ್ದಿ, ಮಾಲಾ ಸಿದ್ದಿ ಎಂಬ ರಂಗಕಲಾವಿದರು ಧ್ವನಿ ಕೊಟ್ಟಿದ್ದಾರಂತೆ. ಕೆಂಡ, ಭಲೇ ಭಾಸ್ಕರ್, ಚೊತ್ತೆ, ಚಿನ್ನು ಎಂಬ ಪಾತ್ರಗಳಲ್ಲಿ ನಟಿಸಿರುವುದೆಲ್ಲ ಹೊಸ ಕಲಾವಿದರು. ಪುನೀತ್, ಇಂದ್ರಕುಮಾರ್, ಚನ್ನಕೇಶವ, ಉಷಾ ರವಿಶಂಕರ್, ಶ್ರೀಧರ್, ವಿಲಾಸ್ ನಾಯಕ್, ಲೋಕಲ್ ಆರ್ಕೆಸ್ಟ್ರಾದಲ್ಲಿ ಹಾಡುವ ಒಬ್ಬ ಸಿಂಗರ್ ಸೇರಿದಂತೆ ಬಹುತೇಕರು ಹೊಸಬರಿದ್ದಾರೆ.
ಹೊಸಬರಿಗೆ ಹಸಿವು ಜಾಸ್ತಿ. ಅಭಿನಯದಲ್ಲಿ ಫ್ರೆಶ್‍ನೆಸ್ ಇರುತ್ತೆ. ಜೊತೆಗೆ ಸೀನಿಯರ್ ಕಲಾವಿದರನ್ನು ಹಾಕಿಕೊಂಡರೆ ಅವರನ್ನು ನೋಡಿಯೇ ಇಡೀ ಪಾತ್ರ ಹೀಗೆಯೇ ಇರುತ್ತೆ ಎಂದು ನಿರ್ಧರಿಸುವಷ್ಟು ಪ್ರೇಕ್ಷಕರು ಅಪ್‍ಡೇಟ್ ಇದ್ದಾರೆ. ಜೊತೆಗೆ ನಾನೂ ಹೊಸಬನಾಗಿಯೇ ಚಿತ್ರರಂಗಕ್ಕೆ ಬಂದವನು. ಈಗ ಹೊಸದಾಗಿ ಡೈರೆಕ್ಟರ್ ಆಗುತ್ತಿದ್ದೇನೆ. ಒಂದಷ್ಟು ಹೊಸಬರಿಗೆ ಚಾನ್ಸ್ ಕೊಡೋಣ ಎಂದುಕೊಂಡೆ, ಕೊಟ್ಟೆ. ಇದು ಹೀರೋ ಕಂ ಡೈರೆಕ್ಟರ್ ದುನಿಯಾ ವಿಜಯ್ ಮಾತು. ಕೆ.ಪಿ.ಶ್ರೀಕಾಂತ್ ಟಗರು ನಂತರ ನಿರ್ಮಿಸುತ್ತಿರುವ ಚಿತ್ರವಿದು. ಕೊರೋನಾ ಕಾಟ ಇಲ್ಲದಿದ್ದರೆ ಇಷ್ಟೊತ್ತಿಗೆ ಥಿಯೇಟರುಗಳಲ್ಲಿರುತ್ತಿತ್ತು. ಈಗ ಮುಂದಕ್ಕೆ ಹೋಗಿದೆ.