ಮೊದಲಿಗೆ ದರ್ಶನ್ ಅಭಿನಯದ ರಾಬರ್ಟ್, ನಂತರ ಪುನೀತ್ ಅಭಿನಯದ ಯುವರತ್ನ, ತದನಂತರ ಪ್ರಜ್ವಲ್ ಅಭಿನಯದ ಅರ್ಜುನ್ ಗೌಡ.. ಹೀಗೆ ಸರಣಿ ಮುಂದುವರಿಯುತ್ತಿದ್ದು, ಆ ಸರಣಿಗೆ ಈಗ ಭಟ್ಟರ ಗಾಳಿಪಟವೂ ಸೇರಿದೆ.
ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟು ಹೊತ್ತಿಗೆ ಯೋಗರಾಜ್ ಭಟ್ಟರು ಗಣೇಶ್, ದಿಗಂತ್, ಪವನ್ ಕುಮಾರ್, ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯರ ದಂಡು ಕಟ್ಟಿಕೊಂಡು ಜಾರ್ಜಿಯಾದಲ್ಲಿರಬೇಕಿತ್ತು. ಲೊಕೇಷನ್ ನೋಡಿಕೊಂಡು ಬಂದು ಎಲ್ಲವನ್ನೂ ಪ್ಲಾನ್ ಮಾಡಿಯೂ ಆಗಿತ್ತು. ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.
ನಮ್ಮ ಚಿತ್ರಕ್ಕೆ ವಿದೇಶದ ಶೂಟಿಂಗ್ ಅತ್ಯಂತ ಮುಖ್ಯ. ಹೀಗಾಗಿ ಇನ್ನೂ ಕೆಲವು ದಿನ ಕಾಯುತ್ತೇವೆ. ಪರಿಸ್ಥಿತಿ ಸುಧಾರಿಸುವವರೆಗೂ ಕಾಯುವುದು ನಮಗೆ ಅನಿವಾರ್ಯ. ನಮ್ಮ ಕಥೆಗೆ ವಿದೇಶ ಬೇಕೇ ಬೇಕು ಎಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಅದರರ್ಥ, ಇನ್ನೂ ಎರಡು ತಿಂಗಳು ಗಾಳಿಪಟ 2ಗೆ ಬ್ರೇಕ್.