` ಬಿಚ್ಚುಗತ್ತಿ ಭರಮಣ್ಣ : ಕನ್ನಡ ನೆಲದ ಗಂಡುಗಲಿಯ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bicchugathi a movie with proud karnataka history
Bicchugathi Movie Image

ಬಿಚ್ಚುಗತ್ತಿ ಭರಮಣ್ಣ. ದುರ್ಗದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಸಾಹಸಿ. ಈತನ ಕುರಿತ ದಂತಕತೆಗಳು ಒಂದೆರಡಲ್ಲ. ಅಪ್ರತಿಮ ವೀರನಾಗಿದ್ದ ಬಿಚ್ಚುಗತ್ತಿ ಭರಮಣ್ಣ, ಕನ್ನಡ ನೆಲದ ಗಂಡುಗಲಿ. ಈತನ ಇತಿಹಾಸ ತಿಳಿದುಕೊಳ್ಳಬೇಕಾದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರೂ ತಪ್ಪಲ್ಲ.

ಇತಿಹಾಸದ ಪ್ರಕಾರ, ವೀರ ಮದಕರಿ ನಾಯಕನಿಗೂ ಮೊದಲು ಚಿತ್ರದುರ್ಗವನ್ನು ಆಳಿದ್ದ ನಾಯಕರಲ್ಲಿ ಭರಮಣ್ಣ ನಾಯಕ ಪ್ರಮುಖ. ಮಹಾ ಪರಾಕ್ರಮಿ. ಇವರು ಮದಕರಿ ನಾಯಕರ ಅಜ್ಜ. ದನ ಕಾಯುತ್ತಿದ್ದ ಭರಮಣ್ಣನನ್ನು ಅರಮನೆಯ ಆನೆ ಹಾರ ಹಾಕಿ, ರಾಜನನ್ನಾಗಿಸಿದ್ದು ಇತಿಹಾಸ. ಅಧಿಕಾರಕ್ಕೆ ಬಂದ ದಿನದಿಂದ ಕೊನೆಯವರೆಗೂ ಸದಾ ಯುದ್ಧ ಮಾಡಬೇಕಾದ ಅನಿವಾರ್ಯತೆ ಭರಮಣ್ಣ ನಾಯಕನಿಗಿತ್ತು.

ದನ ಕಾಯುತ್ತಿದ್ದ ಭರಮಣ್ಣನ ತಲೆ ಮೇಲೆ ಹಾವೊಂದು ನೆರಳು ಕೊಟ್ಟಿತ್ತಂತೆ. ಅದನ್ನು ಕಂಡ ಸಂತರೊಬ್ಬರು ನೀನು ರಾಜನಾಗುತ್ತೀಯ ಎಂದು ಹೇಳಿದ್ದರಂತೆ. ಆಗ ನಕ್ಕಿದ್ದ ಭರಮಣ್ಣ, ಅನಿರೀಕ್ಷಿತವಾಗಿ ಪಟ್ಟಕ್ಕೇರಿದಾಗ ಆ ಸಂತರನ್ನು ಹುಡುಕಿಸಿದನಂತೆ. ಅವರು ಪುಣೆಯ ಸಮೀಪ ಕಂಡಾಗ ಅವರನ್ನು ದುರ್ಗಕ್ಕೆ ಬರಬೇಕು, ಇದು ರಾಜಾಜ್ಞೆ ಎಂದರಂತೆ ಭರಮಣ್ಣನ ಸೇವಕರು. ನನಗೆ ಆಜ್ಞೆ ಮಾಡುವ ರಾಜ ಯಾರೂ ಇಲ್ಲ. ಶಿವನೊಬ್ಬನೇ ನನ್ನ ರಾಜ ಎಂದಾಗ, ಸೇವಕರ ಮಾತಿನ ತಪ್ಪು ಅರಿತ ಭರಮಣ್ಣ, ಸ್ವತಃ ಹೋಗಿ ಸಂತರನ್ನು ಕರೆತಂದನಂತೆ.

ಆದರೆ, ತಾವು ಒಂದು ದಿನ ಶಿವ ಪೂಜೆ ಮಾಡಿದ ಜಾಗದಲ್ಲಿ ಮತ್ತೊಂದು ದಿನ ಶಿವ ಪೂಜೆ ಮಾಡಲಾರೆವು ಎಂದಾಗ, ಅವರಿಗಾಗಿ ದುರ್ಗದಲ್ಲಿ 360 ಲಿಂಗ ಸ್ಥಾಪನೆ ಮಾಡಿದ ಎನ್ನುತ್ತವೆ ಜಾನಪದ ಕಥೆಗಳು. ದುರ್ಗದ ಸುತ್ತ 21 ಕೆರೆಗಳು, 30 ದೇವಾಲಯ ಕಟ್ಟಿಸಿದ ಕೀರ್ತಿ ಭರಮಣ್ಣ ನಾಯಕನದ್ದು. ಬೃಹನ್ಮಠದ ರೂವಾರಿ, ಸಂತೆಹೊಂಡದ ಸೃಷ್ಟಿಕರ್ತ ಭರಮಣ್ಣ ನಾಯಕ.

ರಾಜನಾದ ಕ್ಷಣದಿಂದ ಹೋರಾಟದಲ್ಲೇ ಕಾಲ ಕಳೆದ ಭರಮಣ್ಣ, ವೀರಗತ್ತಿಯನ್ನು ಒರೆಯಲ್ಲಿಡಲು ಆಗಲೇ ಇಲ್ಲ. ಹೀಗಾಗಿಯೇ ಅವರಿಗೆ ಬಿಚ್ಚುಗತ್ತಿ ಭರಮಣ್ಣ ನಾಯಕ ಎಂಬ ಹೆಸರು ಬಂತು ಎನ್ನುತ್ತದೆ ಇತಿಹಾಸ. ಇತಿಹಾಸದ ಈ ರೋಚಕ ಕಥೆಯನ್ನು ತೆರೆಗೆ ತರುತ್ತಿದ್ದಾರೆ ಹರಿ ಸಂತೋಷ್. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿರುವ ಚಿತ್ರದಲ್ಲಿ ಹರಿಪ್ರಿಯಾ ಸಿದ್ದಾಂಬೆಯಾಗಿ ನಟಿಸಿದ್ದಾರೆ. ಚಿತ್ರ ಇದೇ ವಾರ ತೆರೆಗೆ ಬರುತ್ತಿದ್ದು, ಕನ್ನಡ ನೆಲದ ಗಂಡುಗಲಿಯ ಕಥೆಯನ್ನು ಮರೆಯದೆ ನೋಡಲು ಕನ್ನಡಿಗರೂ ಕಾತುರದಿಂದಿದ್ದಾರೆ. 1721ರಲ್ಲಿ ಇವರು ನಿಧನರಾದರೆಂದು ಇತಿಹಾಸ ಹೇಳುತ್ತದೆ. ಮೇಲುದುರ್ಗದಲ್ಲಿ ಇವರ ಸಮಾಧಿ ಇದೆ.

ಓಂ ಸಾಯಿ ಕೃಷ್ಣ ಲಾಂಛನದಲ್ಲಿ ನಿರ್ಮಾಣವಾಗಿರುವ ಬಿಚ್ಚುಗತ್ತಿ ಚಿತ್ರಕ್ಕೆ ನಿಶಾಂತ್, ಜ್ಞಾನೇಶ್ ಬಾಬು ಬಂಡವಾಳ ಹೂಡಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery