ಅಚ್ಯುತ್ ಕುಮಾರ್ ಕನ್ನಡ ಚಿತ್ರರಂಗದ ಸ್ಟಾರ್ ಪೋಷಕ ನಟ. ಅವರೀಗ ದೆವ್ವವಾಗಿದ್ದಾರೆ. ಅದೂ ಅಂತಿಂತ ದೆವ್ವವಲ್ಲ. ಸೈನಿಕ ದೆವ್ವ. ಅವರಿಗೆ ಈ ದೆವ್ವದ ವೇಷ ತೊಡಿಸಿರುವುದು ಕಾಣದಂತೆ ಮಾಯವಾದನು ಚಿತ್ರತಂಡ.
ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕನ ಪಾತ್ರ ಅಚ್ಯುತ್ ಕುಮಾರ್ ಅವರದ್ದು. ಅವರು ಸತ್ತ ಮೇಲೂ ಅತ್ಮವಾಗಿ ಗುಹೆಯೊಂದರ ಕಾವಲಿಗೆ ನಿಲ್ಲುತ್ತಾರೆ. ಆ ಗುಹೆಯೊಳಗೆ ಇನ್ಯಾವುದೇ ಆತ್ಮ ಹೋಗದಂತೆ ಕಾಯುವುದು ಅವರ ಡ್ಯೂಟಿ. ಮೊದಲು ಕಥೆ ಮತ್ತು ಪಾತ್ರ ಹೇಳಿದಾಗ ನಕ್ಕಿದ್ದ ಅಚ್ಯುತ್ ಕುಮಾರ್, ಶೂಟಿಂಗ್ ಸೆಟ್‍ನಲ್ಲಿ ಇಷ್ಟಪಟ್ಟು ಪಾತ್ರ ಮಾಡಿದರು ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ನಿರ್ದೇಶಕ ರಾಜ್ ಪತ್ತಿಪಾಟಿ.
ದೆವ್ವದ ಪಾತ್ರ ಮಾಡಿದ್ದು ಇದೇ ಮೊದಲು ಎನ್ನುವ ಅಚ್ಯುತ್ ಕುಮಾರ್, ಕಲ್ಪನೆಯ ಕ್ರೆಡಿಟ್ಟೆಲ್ಲ ನಿರ್ದೇಶಕರದ್ದು ಎನ್ನುತ್ತಾರೆ. ಜಯಮ್ಮನ ಮಗ ಚಿತ್ರ ನಿರ್ದೇಶಿಸಿದ್ದ ವಿಕಾಸ್, ಈ ಚಿತ್ರಕ್ಕೆ ಹೀರೋ. ಸಿಂಧು ಲೋಕನಾಥ್ ನಾಯಕಿ. ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.