ಅನಂತ್ನಾಗ್ ಅಭಿನಯದ ಉದ್ಭವ ಚಿತ್ರ ನೆನಪಿದೆಯಾ..? ಕೂಡ್ಲು ರಾಮಕೃಷ್ಣ ನಿರ್ದೇಶನದ ಉದ್ಭವ, 1990ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ. ವೈಕುಂಠರಾಜು ಅವರ ಕಥೆಯನ್ನು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದರು ಕೂಡ್ಲು. ಈಗ ಮತ್ತೊಮ್ಮೆ ‘ಮತ್ತೆ ಉದ್ಭವ’ ಚಿತ್ರದ ಮೂಲಕ ಬರುತ್ತಿದ್ದಾರೆ.
ಒನ್ಸ್ ಎಗೇಯ್ನ್ ಇದೂ ಕೂಡ ಹಾಸ್ಯಮಯವಾಗಿಯೇ ಸಾಗುವ ಕಥೆ. ಅನಂತ್ನಾಗ್ ಡೇಟ್ಸ್ ಸಮಸ್ಯೆ ಆಗಿದ್ದರಿಂದ ರಂಗಾಯಣ ರಘು ಅವರನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ ಕೂಡ್ಲು. ಆದರೆ, ಇಲ್ಲಿ ರಂಗಭೂಮಿ ಪ್ರತಿಭೆ ಪ್ರಮೋದ್ ನಾಯಕ. ಉದ್ಭವಕ್ಕಿಂತಲೂ ಅದ್ಭುತ ಅನುಭವ ಕೊಡಲಿದೆ ಎನ್ನುವುದು ಕೂಡ್ಲು ಭರವಸೆ.
ಡ್ಯಾನ್ಸ್, ಫೈಟ್ಸ್, ಕಾಮಿಡಿ ಎಲ್ಲವೂ ಇರುವ ಮಾಸ್ ಸಿನಿಮಾ ಎನ್ನುವ ಕೂಡ್ಲು, ಒಂದು ಸಸ್ಪೆನ್ಸ್ ಇಟ್ಟಿದ್ದಾರೆ. ಉದ್ಭವದಲ್ಲಿ ದೇವರು ದೊಡ್ಡ ಪಾತ್ರ, ಇಲ್ಲಿ ದೇವರಿಗಿಂತಲೂ ದೊಡ್ಡ ಸೆನ್ಸೇಷನ್ ಇದೆಯಂತೆ. ಏನದು..? ಅದೇ ಸಸ್ಪೆನ್ಸ್.
ಇಲ್ಲಿ ಪ್ರಮೋದ್ ಹಿರಿಯ ಮಗನಾಗಿ ಕಾಣಿಸಿಕೊಂಡರೆ, ಮಂಡ್ಯ ರವಿ ಎರಡನೇ ಮಗ. ಮಿಲನ ನಾಗರಾಜ್ ಅವರು ಪರಿಸರಪ್ರೇಮಿ ಮತ್ತು ರಾಜಕಾರಣಿ. ಮೋಹನ್ ಶೃಂಗಾರ ಸ್ವಾಮಿ. ಮೋಹನ್ ಅವರ ಭಕ್ತೆ ಶುಭರಕ್ಷಾ. ಉಳಿದಂತೆ ಸುಧಾಬೆಳವಾಡಿ, ಅವಿನಾಶ್, ಗಿರೀಶ್ಭಟ್, ಚೇತನ್, ನರೇಶ್, ಶಂಕರ್ ಅಶ್ವಥ್ ಮೊದಲಾದ ದೊಡ್ಡ ತಾರಾಬಳಗವೇ ಇದೆ.
ನಿತ್ಯಾನಂದಭಟ್, ಸತ್ಯ, ಮಹೇಶ್ ಮುದ್ಗಲ್ ಮತ್ತು ರಾಜೇಶ್ ಜಂಟಿ ನಿರ್ಮಾಣದ ಚಿತ್ರ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಮತ್ತೆ ಉದ್ಭವವಾಗಲಿದೆ.