ನಟ ರಾಘವೇಂದ್ರ ರಾಜ್ಕುಮಾರ್ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿದ್ದರೂ, ರಾಜ್ಯ ಪ್ರಶಸ್ತಿ ಮುಕುಟ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಅಮ್ಮನ ಮನೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ರಾಘವೇಂದ್ರ ರಾಜ್ಕುಮಾರ್, ಪ್ರಶಸ್ತಿಯ ಶ್ರೇಯವನ್ನು ಚಿತ್ರದ ನಿರ್ದೇಶಕ ನಿಖಿಲ್ ಮಂಜು ಅವರಿಗೆ ಕೊಟ್ಟಿದ್ದಾರೆ.
ಇದು ನನ್ನ ವೃತ್ತಿ ಜೀವನದ ಮೊದಲ ಪ್ರಶಸ್ತಿ. ಅಪ್ಪಾಜಿ, ಅಣ್ಣ, ಪುನೀತ್ ಮತ್ತು ಪೂರ್ಣಿಮಾಗೆ ರಾಜ್ಯ ಪ್ರಶಸ್ತಿ ಸಿಕ್ಕಿದ್ದವು. ನನಗೆ ಸಿಕ್ಕಿರಲಿಲ್ಲ. ಈಗ ಇಡೀ ಕುಟುಂಬಕ್ಕೆ ಪ್ರಶಸ್ತಿ ಸಿಕ್ಕಂತಾಗಿದೆ. ಈ ಪ್ರಶಸ್ತಿಯನ್ನು ಚಿತ್ರದ ನಿರ್ದೇಶಕರಿಗೇ ಅರ್ಪಿಸುತ್ತೇನೆ ಎಂದಿದ್ದಾರೆ ರಾಘವೇಂದ್ರ ರಾಜ್ಕುಮಾರ್.
ದೈಹಿಕವಾಗಿ ದುರ್ಬಲನಾಗಿರುವ ವಿಕಲಚೇತನ ವ್ಯಕ್ತಿ, ತನ್ನ ತಾಯಿಯನ್ನು ನೋಡಿಕೊಳ್ಳಲು ಒದ್ದಾಡುವ, ಅನ್ಯಾಯವನ್ನು ಸಹಿಸದ ರಾಜೀವ ಎಂಬ ಪಾತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಅಭಿನಯ ಮನ ಸೆಳೆದಿತ್ತು. ಆತ್ಮಶ್ರೀ ಬ್ಯಾನರ್ ನಿರ್ಮಾಣದ ಚಿತ್ರವನ್ನು ನಿಖಿಲ್ ಮಂಜು ನಿರ್ದೇಶಿಸಿದ್ದರು.