ಮೆಗಾಸ್ಟಾರ್ ಚಿರಂಜೀವಿ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ರಾಜಶೇಖರ್ ಕೂಡಾ ತೆಲುಗು ಇಂಡಸ್ಟ್ರಿಯ ಸ್ಟಾರ್ ನಟ. ಇವರಿಬ್ಬರ ಮಧ್ಯೆ ಮಾ ವೇದಿಕೆಯಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಮಾ ಎಂದರೆ, ಕರ್ನಾಟಕದಲ್ಲಿ ಕನ್ನಡ ಚಲನಚಿತ್ರ ಕಲಾವಿದರ ಸಂಘ ಇದೆಯಲ್ಲ.. ಹಾಗೆ. ತೆಲುಗು ಚಿತ್ರರಂಗದ ಕಲಾವಿದರ ಸಂಘಟನೆ. ಈ ಇಬ್ಬರು ಸ್ಟಾರ್ಗಳ ಗಲಾಟೆಗೆ ಕಾರಣವಾಗಿದ್ದು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡ ಎಂದರೆ ರಾಜ್ಕುಮಾರ್ ಭವನ ಎಂದರೆ ನಂಬಲೇಬೇಕು.
ಆಗಿದ್ದು ಇಷ್ಟು, ಮಾ ಸಂಘಟನೆಯ ಡೈರಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಚಿರಂಜೀವಿ, ಡಾ.ರಾಜ್ಕುಮಾರ್ ಭವನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾವೂ ಕೂಡಾ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಕಟ್ಟಿರುವ ಕಟ್ಟಡದ ಮಾದರಿಯಲ್ಲಿ ಒಂದು ಭವ್ಯ ಕಟ್ಟಡ ಕಟ್ಟೋಣ. ಮಾ ಸಂಘದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು, ಕರ್ನಾಟಕ ಚಲನಚಿತ್ರ ಕಲಾವಿದರಂತೆ ಬೆಳೆಯೋಣ ಎಂದಿದ್ದಾರೆ.
ಇಷ್ಟು ಹೊತ್ತಿಗೆ ಮಾ ಸಂಘಟನೆಯ ಉಪಾಧ್ಯಕ್ಷ ನಟ ಡಾ.ರಾಜಶೇಖರ್ ಬಂದು ಚಿರಂಜೀವಿ ಕೈಲಿದ್ದ ಮೈಕ್ ಕಿತ್ತುಕೊಂಡು ಸಂಘಟನೆಯಲ್ಲಿರುವ ಸಮಸ್ಯೆ, ತಮ್ಮ ವೈಯಕ್ತಿಕ ಸಮಸ್ಯೆ, ಕಲಾವಿದರ ನಡುವಿನ ವೈಮನಸ್ಯಗಳ ಬಗ್ಗೆಯೆಲ್ಲ ಮಾತನಾಡಲು ಶುರು ಮಾಡಿದ್ದಾರೆ. ಚಿರಂಜೀವಿ, ಕೃಷ್ಣಂ ರಾಜು, ಮೋಹನ್ ಬಾಬು, ಜಯಸುಧಾ ಸೇರಿದಂತೆ ಹಲವರು ರಾಜಶೇಖರ್ ಅವರನ್ನು ಸಮಾಧಾನಿಸಲು ಯತ್ನಿಸಿದರೂ, ರಾಜಶೇಖರ್ ಮಾತು ನಿಲ್ಲಿಸಿಲ್ಲ. ಟೀಕೆಗಳನ್ನೂ ನಿಲ್ಲಿಸಿಲ್ಲ. ಇದು ಚಿರಂಜೀವಿಯವರನ್ನು ಕೆರಳಿಸಿಬಿಟ್ಟಿದೆ.
ಎಲ್ಲ ಮುಗಿದ ಮೇಲೆ ರಾಜಶೇಖರ್ ವರ್ತನೆ ಸರಿಯಿಲ್ಲ, ಅವರ ವಿರುದ್ಧ ಮಾ ಸಮಘಟನೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಆಗ್ರಹಿಸಿದ್ದಾರೆ ಚಿರಂಜೀವಿ. ರಾಜಶೇಖರ್ ಅವರನ್ನು ಮಾ ಸಂಘಟನೆ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಇದು ಟಾಲಿವುಡ್ ಸುದ್ದಿ. ಸದ್ಯಕ್ಕೆ ಟಾಲಿವುಡ್ ಈ ವಿಚಾರಕ್ಕೆ ಇಬ್ಭಾಗವಾಗಿದೆ.