ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಗೆ ಬರುವುದೇ ಅಪರೂಪ. ವೀಕೆಂಡ್ ವಿತ್ ರಮೇಶ್ ಬಿಟ್ಟರೆ, ದರ್ಶನ್ ಕಾಣಿಸಿಕೊಂಡಿದ್ದು ಗೆಳೆಯ ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸಿನಲ್ಲಿ ಮಾತ್ರ. ಉಳಿದಂತೆ ದರ್ಶನ್ ಟಿವಿಗಳಲ್ಲಿ ಸಂದರ್ಶನ ಕೊಡುವುದು ಅವರ ಸಿನಿಮಾ ರಿಲೀಸ್ ಪ್ರಚಾರಕ್ಕಾಗಿ ಮಾತ್ರ. ಅವರನ್ನು ಕಿರುತೆರೆಯ ಕಾರ್ಯಕ್ರಮಕ್ಕೆ ಕರೆತರುವ ಹಲವರ ಪ್ರಯತ್ನ ಯಶಸ್ವಿಯಾಗಿಲ್ಲ.
ಅಂತಹ ದರ್ಶನ್ ಅವರನ್ನು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಕರೆತಂದಿದೆ ಝೀ ವಾಹಿನಿ. ಕಾರಣ ಹಲವು. ಕಾಮಿಡಿ ಕಿಲಾಡಿಗಳು ಶೋನ ಜಡ್ಜ್ಗಳಾದ ರಕ್ಷಿತಾ ಪ್ರೇಮ್, ದರ್ಶನ್ ಅವರ ಆತ್ಮೀಯ ಗೆಳತಿ. ಯೋಗರಾಜ್ ಭಟ್ ಮತ್ತು ಜಗ್ಗೇಶ್ ಅವರ ಜೊತೆ ಇರುವ ಸ್ನೇಹ. ಇದೆಲ್ಲದರ ಜೊತೆಗೆ ಇತ್ತೀಚೆಗೆ ಝೀನಲ್ಲಿ ಪ್ರಸಾರವಾಗಿದ್ದ ಮುನಿರತ್ನ ಕುರುಕ್ಷೇತ್ರ ಗಳಿಸಿರುವ ಬೊಂಬಾಟ್ ಟಿಆರ್ಪಿ.
ಈ ಎಲ್ಲ ಸಂಭ್ರಮವನ್ನೂ ಝೀ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ದರ್ಶನ್ ಅವರ ಜೊತೆಯಲ್ಲಿ ಸೆಲಬ್ರೇಟ್ ಮಾಡಿದ್ದಾರೆ. ಅಂದಹಾಗೆ ಈ ವಾರದ ಕಾಮಿಡಿ ಕಿಲಾಡಿಗಳು ಶೋನ ಪ್ರಮುಖ ಆಕರ್ಷಣೆಯೇ ದರ್ಶನ್.