ಈಗ ಬಿಡುಗಡೆಯಾಗಿ ರಾಜ್ಯಾದ್ಯಂತ ಭರ್ಜರಿ ಸೌಂಡು ಮಾಡುತ್ತಿರುವ ಅವನೇ ಶ್ರೀಮನ್ನಾರಾಯಣ ಇರಬಹುದು, ಬಾಕ್ಸಾಫೀಸ್‍ನಲ್ಲಿ ಮೋಡಿ ಮಾಡಿದ ಯಜಮಾನ, ಕುರುಕ್ಷೇತ್ರ, ಪೈಲ್ವಾನ್, ನಟಸಾರ್ವಭೌಮ.. ಹೀಗೆ ಯಾವುದೇ ಸಿನಿಮಾ ಇರಬಹುದು. ಇಲ್ಲಿ ಥಿಯೇಟರಿನಲ್ಲಿ ರಿಲೀಸ್ ಆಗಿ, ಅಭಿಮಾನಿಗಳು ಕುಣಿದು ಕುಪ್ಪಳಿಸಿ ನೋಡುತ್ತಿರುವಾಗಲೇ ಮೊಬೈಲುಗಳಲ್ಲಿ ಇಡೀ ಸಿನಿಮಾ ಹೆಚ್‍ಡಿ ರೂಪದಲ್ಲಿ ಬಂದಿರುತ್ತೆ. ಅಷ್ಟು ಪ್ರಬಲವಾಗಿದೆ ಸಿನಿಮಾ ಪೈರಸಿ ಜಾಲ. ತಮಿಳ್ ರಾಕರ್ಸ್ ಈ ಪೈರಸಿ ಲೋಕದಲ್ಲಿ ಅತೀ ದೊಡ್ಡ ಹೆಸರು. ಈಗ ಈ ಪೈರಸಿ ಕ್ರಿಮಿನಲ್ಲುಗಳನ್ನು ಮಟ್ಟ ಹಾಕಲು ಹೊಸ ಕಾಯ್ದೆ ತರಲು ಹೊರಟಿದೆ ಕೇಂದ್ರ ಸರ್ಕಾರ.
ಸಿನಿಮಾಟೋಗ್ರಫಿ ಕಾಯ್ದೆ 1952ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ, ಈ ವಿಷಯಕ್ಕೆ ಆಗಲೇ ಕ್ಯಾಬಿನೆಟ್ ಅನುಮೋದನೆಯನ್ನೂ ಪಡೆದುಕೊಂಡಿದೆ. ಈ ಕಾಯ್ದೆ ಜಾರಿಗೆ ಬಂದರೆ, ಪೈರಸಿ ಸಿನಿಮಾ ನೋಡುವವರು, ಪೈರಸಿ ಮಾಡುವವರು ಇಬ್ಬರೂ ಅಪರಾಧಿಗಳೇ. 10 ಲಕ್ಷ ರೂ. ದಂಡ, 3 ವರ್ಷ ಜೈಲು ಫಿಕ್ಸ್. ಸಿನಿಮಾವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುವುದೂ ಕಾನೂನಾತ್ಮಕ ಅಪರಾಧವಾಗಲಿದೆ.
ಕೇಂದ್ರದ ಹೊಸ ಪ್ರಸ್ತಾಪವನ್ನು ದೇಶದ ಎಲ್ಲ ಫಿಲಂ ಚೇಂಬರುಗಳೂ ಸ್ವಾಗತಿಸಿವೆ. ಪ್ರತಿ ಭಾಷೆಯ ಚಿತ್ರರಂಗವೂ ಈ ಪೈರಸಿಯ ವಿರುದ್ಧ ಯುದ್ಧ ನಡೆಸುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಿಟ್ಟಿದ್ದು, ಚಿತ್ರಮಂದಿರಗಳಲ್ಲಿ ಜಾಗೃತಿ ಸಂದೇಶ ಸಾರಲು ಮುಂದಾಗಿದೆ.