ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ 2019 ಲಕ್ಕಿ ವರ್ಷ. ಈ ಅದೃಷ್ಟದ ವರ್ಷದಲ್ಲಿ ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಕೊಟ್ಟ ಸುದೀಪ್, ಕನ್ನಡದಲ್ಲಿ ಪೈಲ್ವಾನ್ ಆಗಿ ಅಬ್ಬರಿಸಿದ್ದಾರೆ. ಸೈರಾ ನರಸಿಂಹ ರೆಡ್ಡಿಯಲ್ಲಿ ಅವುಕು ರಾಜನಾಗಿ ಮೆರೆದಿದ್ದಾರೆ. ದಬಾಂಗ್ 3ಯಲ್ಲಿ ಬಲ್ಲಿ ಸಿಂಗ್ ಆಗಿ ಆರ್ಭಟಿಸಿದ್ದಾರೆ. ಇಷ್ಟೆಲ್ಲ ಆಗಿಯೂ ಬಿಡುವಿಲ್ಲದೆ ನಟಿಸುತ್ತಿರುವ ಸುದೀಪ್ ಸದ್ಯಕ್ಕೆ ಕೋಟಿಗೊಬ್ಬ 3 ಚಿತ್ರದಲ್ಲಿ ಬ್ಯುಸಿ. ಕ್ಯೂನಲ್ಲಿ ಅನೂಪ್ ಭಂಡಾರಿ, ಪ್ರಿಯದರ್ಶನ್ ಚಿತ್ರಗಳಿವೆ. ಇಷ್ಟೆಲ್ಲದರ ನಡುವೆಯೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಸುದೀಪ್, ಮತ್ತೆ ಡೈರೆಕ್ಷನ್ನತ್ತ ಸುಳಿವು ಕೊಟ್ಟಿದ್ದಾರೆ.
2014ರಲ್ಲಿ ಮಾಣಿಕ್ಯ ಚಿತ್ರದ ನಂತರ ಮತ್ತೆ ಸುದೀಪ್ ನಿರ್ದೇಶನ ಮಾಡಿಲ್ಲ. ಸುದೀರ್ಘ ಗ್ಯಾಪ್ ನಂತರ ಮತ್ತೊಮ್ಮೆ ಡೈರೆಕ್ಷನ್ ಮಾಡುವ ಸುದ್ದಿ ಕೊಟ್ಟಿದ್ದಾರೆ ಕಿಚ್ಚ. ಮತ್ತು ಇದು ರೀಮೇಕ್ ಅಲ್ಲ. ಅಪ್ಪಟ ಸ್ವಮೇಕ್ ಚಿತ್ರ. ಚಿತ್ರದ ಕಥೆ, ಚಿತ್ರಕಥೆ ಕೆಲಸದಲ್ಲಿ ಕಂಪ್ಲೀಟ್ ತೊಡಗಿಸಿಕೊಂಡಿರುವ ಸುದೀಪ್, ಹೊಸ ವರ್ಷಕ್ಕೆ ಮತ್ತೆ ನಿರ್ದೇಶಕರಾಗಲಿದ್ದಾರೆ ಎನ್ನುವುದೇ ಬಿಗ್ ನ್ಯೂಸ್.