ಸುಮನ್ ನಗರ್ಕರ್. ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾ. ನಿಷ್ಕರ್ಷ, ಬೆಳದಿಂಗಳ ಬಾಲೆ, ನಮ್ಮೂರ ಮಂದಾರ ಹೂವೆ, ಮುಂಗಾರಿನ ಮಿಂಚು, ಅಮ್ಮಾವ್ರ ಗಂಡ, ದೋಣಿ ಸಾಗಲಿ, ಪ್ರೀತ್ಸು ತಪ್ಪೇನಿಲ್ಲ.. ಮೊದಲಾದ ಚಿತ್ರಗಳಲ್ಲಿ 2ನೇ ನಾಯಕಿ. ಅದರಲ್ಲೂ ಬೆಳದಿಂಗಳ ಬಾಲೆಯಲ್ಲಿ ಮುಖವನ್ನೇ ತೋರಿಸದೆ ಆಟವಾಡಿಸುವ ಚೆಲುವೆ. ನಾಯಕಿಯಾಗಿ ನಟಿಸಿದ್ದ ಹೂಮಳೆ ಚಿತ್ರ ಪ್ರೇಕ್ಷಕರನ್ನು ತಲ್ಲಣಗೊಳಿಸಿತ್ತು. ಅಂದಹಾಗೆ ಸುಮನ್ ನಗರ್ಕರ್ ಅಭಿನಯಿಸಿದ್ದ ಮೊದಲ ಸಿನಿಮಾ ಕಲ್ಯಾಣ ಮಂಟಪ.
ಸುನಿಲ್ ಕುಮಾರ್ ದೇಸಾಯಿ, ನಾಗತಿಹಳ್ಳಿ ಚಂದ್ರಶೇಖರ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು.. ಮೊದಲಾದ ದಿಗ್ಗಜರೊಂದಿಗೆ ಕೆಲಸ ಮಾಡಿದ್ದ ಸುಮನ್, ಈ ಬಾರಿ ಸುಜಯ್ ರಾಮಯ್ಯ ಎಂಬ ನಿರ್ದೇಶಕರ ಬಬ್ರೂ ಸಿನಿಮಾ ಮೂಲಕ ಮರಳಿ ಬಂದಿದ್ದಾರೆ.
15 ವರ್ಷಗಳ ನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರ ಇಷ್ಟಕಾಮ್ಯ ಚಿತ್ರದ ಮೂಲಕ ವಾಪಸ್ ಆದ ಸುಮನ್ ನಗರ್ಕರ್, ಈಗ ಮತ್ತೊಮ್ಮೆ ನಾಯಕಿಯಾಗಿಯೇ ರೀ ಎಂಟ್ರಿ ಕೊಟ್ಟಿದ್ದಾರೆ. ಬಬ್ರೂ ಚಿತ್ರದ ಮೂಲಕ. ಚಿತ್ರದ ನಾಯಕಿಯೂ ಹೌದು, ನಿರ್ಮಾಪಕಿಯೂ ಹೌದು.
ಜರ್ನಿಯ ಕ್ರೇಜ್ ಹೊಂದಿರೋ ಸೋಮಾರಿ ಹುಡುಗನ ಜೊತೆ ಪ್ರಯಾಣ ಹೊರಡುವ ನಾಯಕಿ, ಜರ್ನಿಯಲ್ಲಿ ಎದುರಿಸುವ ಅನುಭವಗಳೇ ಚಿತ್ರದ ಕಥೆ. ಕನ್ನಡಕ್ಕೆ ಇದು ಹೊಸತು.
ಬಬ್ರೂಗೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ಡಿಸೆಂಬರ್ 6ರಂದು ರಿಲೀಸ್ ಆಗುತ್ತಿದೆ.