ಕನ್ನಡ ಚಿತ್ರರಂಗ ಈ ಗ ಹೊಸ ಪ್ರಯತ್ನಗಳಿಂದ ಕಳೆಗಟ್ಟಿದೆ. ಇಂತಹ ವಿಭಿನ್ನ ಪ್ರಯತ್ನದ ಮುಂದುವರಿದ ಭಾಗವೇ ಬಬ್ರೂ. ಅಚ್ಚುಕಟ್ಟುತನದಿಂದ, ಹೊಸ ಪ್ರಯೋಗಗಳಿಂದ ರೂಪುಗೊಂಡಿರುವ ಚಿತ್ರ. ಟ್ರೇಲರ್ ಮೂಲಕ ಪ್ರೇಕ್ಷಕರನ್ನೆಲ್ಲ ಆಕರ್ಷಿಸಿರುವ ಬಬ್ರೂ ಇದೇ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆದಿದೆ.
ಅಮೆರಿಕದ ಸಿನಿ ಲಾಂಚ್‍ನಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋ ಏರ್ಪಡಿಸಿಲಾಗಿತ್ತು. ನವೆಂಬರ್ 2ರಂದೇ ನಡೆದಿದ್ದ ಪ್ರೀಮಿಯರ್ ಶೋನಲ್ಲಿ ಬಬ್ರೂಗೆ ಪ್ರೇಕ್ಷಕರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. ಅಮೆರಿಕಾದ ಸಿನಿ ಲಾಂಚ್‍ನ ಅಷ್ಟೂ ಪರದೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡ ಕನ್ನಡ ಚಿತ್ರ ಬಬ್ರೂ.
ಒಂದು ಅನಿರೀಕ್ಷಿತ ಜರ್ನಿಯ ಕಥೆಯಲ್ಲಿ ಪ್ರೀತಿ, ಪ್ರೇಮ ಮತ್ತು ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಕಥೆಯಿದೆ. ಈವರೆಗೆ ಯಾವ ಭಾಷೆಯ ಸಿನಿಮಾಗಳಲ್ಲಿಯೂ ಕಾಣಿಸದೆ ಇದ್ದ ಅಮೆರಿಕಾದ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರ ಬಬ್ರೂ.
ಸುಜಯ್ ರಾಮಯ್ಯ ನಿರ್ದೇಶನದ ಚಿತ್ರ, ಯುಗ ಕ್ರಿಯೇಷನ್ಸ್ ಹಾಗೂ ಸುಮನ್ ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿ ಸುಮನ್ ನಗರ್‍ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.