ಚಾಲೆAಜಿAಗ್ ಸ್ಟಾರ್ ದರ್ಶನ್ ಮದಕರಿನಾಯಕನಾಗಿ ನಟಿಸುತ್ತಿರುವ ಚಿತ್ರ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿದೆ. ಚಿತ್ರದುರ್ಗದಲ್ಲಿರುವ ಮದಕರಿ ನಾಯಕನ ಆರಾಧ್ಯ ದೈವಗಳಾಗಿದ್ದ ಹುಚ್ಚೆಂಗಮ್ಮ, ಏಕನಾಥೇಶ್ವರಿ, ಬರಗೇರಮ್ಮ ದೇಗುಲಗಳಲ್ಲಿ ಪೂಜೆ ಮಾಡಿದ್ದಾರೆ.
ರಾಜೇಂದ್ರ ಸಿಂಗ್ ಬಾಬು ಚಿತ್ರದಲ್ಲಿ ಇದೇ ಮೊದಲ ಬಾರಿಗೆ ದರ್ಶನ್ ನಟಿಸುತ್ತಿದ್ದರೆ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಚಿತ್ರದ ಕಥೆ, ಸಂಭಾಷಣೆ ಬಿ.ಎಲ್.ವೇಣು ಅವರದ್ದು.
ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಜೊತೆ ಹಂಸಲೇಖ ಜೊತೆಯಾಗಿದ್ದಾರೆ. ಹೀಗಾಗಿ ಅದ್ಭುತ ಹಾಡುಗಳು ಹೊರಹೊಮ್ಮುವ ನಿರೀಕ್ಷೆ ಇದೆ. ರಾಕ್ಲೈನ್ ವೆಂಕಟೇಶ್ ಅವರ ಬಹುಕಾಲದ ಕನಸು ಮದಕರಿ ನಾಯಕನ ಸಿನಿಮಾ. ಆ ಕನಸನ್ನು ನನಸು ಮಾಡಿಕೊಳ್ಳಲು ಮುಂದಾಗಿದ್ದಾರೆ ರಾಕ್ಲೈನ್. ಚಿತ್ರದ ತಂತ್ರಜ್ಞರು, ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ. ಡಿಸೆಂಬರ್ 6ರಂದು ಚಿತ್ರದ ಮುಹೂರ್ತ.