ಕಿಚ್ಚ ಸುದಿಪ್ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ ಎಂಬ ಸುದ್ದಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಕಿಚ್ಚ ನಿರ್ದೇಶನದ ಚಿತ್ರಗಳಲ್ಲಿ ಕಿಚ್ಚನ ಸ್ಪರ್ಶ ಇದ್ದೇ ಇರುತ್ತೆ. ಮೈ ಆಟೋಗ್ರಾಫ್ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಸುದೀಪ್ ಇದುವರೆಗೆ ಜಸ್ಟ್ ಮಾತ್ ಮಾತಲ್ಲಿ, ವೀರ ಮದಕರಿ, ನಂ 73, ಶಾಂತಿನಿವಾಸ, ಕೆಂಪೇಗೌಡ ಮತ್ತು ಮಾಣಿಕ್ಯ ಚಿತ್ರಗಳಿಗೆ ಌಕ್ಷನ್ ಕಟ್ ಹೇಳಿದ್ದಾರೆ. ಜಸ್ಟ್ ಮಾತ್ ಮಾತಲ್ಲಿ ಬಿಟ್ಟರೆ, ಉಳಿದೆಲ್ಲ ಚಿತ್ರಗಳೂ ರೀಮೇಕ್. ಹೀಗಾಗಿಯೇ ಈ ಬಾರಿ ಕೂಡಾ ಕಿಚ್ಚ ರೀಮೇಕ್ ಮಾಡುತ್ತಿದ್ದಾರೆ ಎಂದೇ ಎಲ್ಲ ಕಡೆ ಸುದ್ದಿಯಾಗಿತ್ತು.
ಅದರಲ್ಲೂ ಭರತ್ ಅನೆ ನೇನು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಗೆ ರೆಕ್ಕೆ ಪುಕ್ಕ ಬಂದಿತ್ತು. ಅಫ್ಕೋರ್ಸ್, ಸುದೀಪ್ ಸ್ಟಾರ್ ಡಂಗೆ ಹೇಳಿ ಮಾಡಿಸಿದ ಚಿತ್ರ ಭರತ್ ಅನೆ ನೇನು. ಆದರೆ, ಈ ಎಲ್ಲ ಗಾಳಿ ಸುದ್ದಿಗಳಿಗೆ ಸುದೀಪ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ಈ ಬಾರಿ ಅವರು ಒನ್ಸ್ ಎಗೇಯ್ನ್ ಸ್ವಮೇಕ್ ಚಿತ್ರದೊಂದಿಗೆ ಬರುತ್ತಿದ್ದಾರೆ.
‘ನಾನು ಹೊಸ ಸ್ಕ್ರಿಪ್ಟ್ ಮಾಡುತ್ತಿದ್ದೇನೆ. ಅದು ರೀಮೇಕ್ ಅಲ್ಲ. ನಮ್ಮ ತಂಡದ ಸದಸ್ಯರು ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ ಸುದೀಪ್.
ಸದ್ಯಕ್ಕೆ ಅವರು ಕೋಟಿಗೊಬ್ಬ 3 ಶೂಟಿಂಗ್‌ನಲ್ಲಿ ಬ್ಯುಸಿ. ಮುಂದಿನ ತಿಂಗಳು ಸುದೀಪ್ ಅವರ ಹಿಂದಿ ಸಿನಿಮಾ ದಬಾಂಗ್ 3 ರಿಲೀಸ್. ಅದು ಮುಗಿಯುತ್ತಿದ್ದಂತೆ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್. ಇದರ ನಡುವೆಯೇ ಸುದೀಪ್ ನಿರ್ದೇಶನದ ಹೊಸ ಚಿತ್ರ ಸೆಟ್ಟೇರುವುದು ಈಗ 100% ಪಕ್ಕಾ.