2019, ದರ್ಶನ್ ಪಾಲಿಗೆ ಶುಭದಾಯಕ ವರ್ಷ. ಈ ವರ್ಷ ದರ್ಶನ್ ಅವರ ಯಜಮಾನ ಮತ್ತು ಕುರುಕ್ಷೇತ್ರ ಸಿನಿಮಾಗಳು ರಿಲೀಸ್ ಆಗಿದ್ದು, ಎರಡೂ ಚಿತ್ರಗಳು 100 ದಿನ ಪೂರೈಸಿವೆ. ಬಾಕ್ಸಾಫೀಸ್ ಸುಲ್ತಾನ್, ಬಾಕ್ಸಾಫೀಸ್ ಯಜಮಾನನಾದ ವರ್ಷವಿದು. ಈಗ ಅವರ ಒಡೆಯ ಚಿತ್ರವೂ ರಿಲೀಸ್ ಆಗೋಕೆ ರೆಡಿಯಾಗಿದೆ. ಅತ್ತ, ರಾಬರ್ಟ್ ಕೆಲಸ ಶರವೇಗದಲ್ಲಿ ಸಾಗುತ್ತಿದೆ. ಇದರ ನಡುವೆಯೇ ಮದಕರಿ ನಾಯಕನ ಕೋಟೆಗೆ ಲಗ್ಗೆಯಿಡಲು ಸಜ್ಜಾಗಿದ್ದಾರೆ ದರ್ಶನ್.
ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಗಂಡುಗಲಿ ಮದಕರಿ ನಾಯಕ ಸೆಟ್ಟೇರುತ್ತಿದೆ. ಈ ಚಿತ್ರದ ಪಙ್ರಿ ಪ್ರೊಡಕ್ಷನ್ ಕೆಲಸಗಳು ಒಂದು ಹಂತಕ್ಕೆ ಮುಗಿದಿದ್ದು, ಡಿಸೆಂಬರ್ 02ರಂದು ಮುಹೂರ್ತ ನೆರವೇರಲಿದೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಬಿ.ಎಲ್. ವೇಣು ಕಥೆ, ಚಿತ್ರಕಥೆ, ಸಂಭಾಷಣೆ ಹೊಣೆ ಹೊತ್ತುಕೊಂಡಿದ್ದಾರೆ. ತಮ್ಮದೇ ಕಾದಂಬರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ. ಸಂಗೀತದ ಹೊಣೆಗಾರಿಕೆ ಹೊತ್ತಿರುವುದು ನಾದಬ್ರಹ್ಮ ಹಂಸಲೇಖ. ಅಶೋಕ್ ಕಶ್ಯಪ್ ಛಾಯಾಗ್ರಹಣವಿದೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲ ಒಂದೆಡೆ ಸೇರುತ್ತಿದ್ದು, ಐತಿಹಾಸಿಕ ಚಿತ್ರವೊಂದು ತಯಾರಾಗಲಿದೆ.