ಅಕ್ಟೋಬರ್ 30ರಂದು 2ನೇ ಮಗುವಿಗೆ ಜನ್ಮ ನೀಡಿದ್ದ ರಾಧಿಕಾ ಪಂಡಿತ್, ಪತಿ ಯಶ್ ಅವರೊಂದಿಗೆ ಸುದ್ದಿಗೋಷ್ಟಿ ನಡೆಸಿ, ಮಗುವಿನ ಆರೋಗ್ಯದ ಮಾಹಿತಿ ನೀಡಿದ್ದಾರೆ. ನಟ ಯಶ್ ಅವರಂತೂ ‘ದೇವರ ದಯೆ, ಅಮ್ಮ, ಮಗು ಸೂಪರ್ ಆಗಿದ್ದಾರೆ. ಎರಡನೇ ಮಗುವಾಗಿದ್ದರಿಂದ ಸ್ವಲ್ಪ ಅನುಭವವೂ ಇತ್ತು. ನನ್ನ ಆಸೆಯಂತೆ ಹೆಣ್ಣು ಮತ್ತು ರಾಧಿಕಾ ಆಸೆಯಂತೆ ಗಂಡು ಮಗುವಾಗಿದೆ. ಅಕ್ಟೋಬರ್ 10ರಿಂದ ಯಾವುದೇ ಶೂಟಿಂಗ್ ಮಾಡಿಲ್ಲ. ರಜೆಯಲ್ಲಿದ್ದೆ. ರಾಧಿಕಾಗೆ ಪ್ರಾಮಿಸ್ ಮಾಡಿದ್ದೆ. ಅದರಂತೆ ತುಂಬಾ ಹೊತ್ತು ರಾಧಿಕಾ ಜೊತೆಯಲ್ಲಿದ್ದೆ. ಎರಡು ಮಕ್ಕಳ ಜನನದ ಹೊತ್ತಿನಲ್ಲೂ ನಾನು ಆಪರೇಷನ್ ಥಿಯೇಟರಿನಲ್ಲಿದ್ದೆ ಎಂದಿದ್ದಾರೆ.
ರಾಧಿಕಾ ಪಂಡಿತ್ ಮಾತನಾಡಿ ‘ಒಂಭತ್ತು ತಿಂಗಳು ಹೊತ್ತು ಜನ್ಮ ಕೊಟ್ಟರೂ ಇಬ್ಬರೂ ಮಕ್ಕಳು ಯಶ್ ರೀತಿಯಲ್ಲೇ ಇದ್ದಾರೆ. ನನ್ನ ರೀತಿ ಇಲ್ಲ’ ಎಂದು ಜೋಕ್ ಮಾಡಿದರು. ಶುಭಾಶಯ ಕೋರಿದವರಿಗೆ ಧನ್ಯವಾದ ತಿಳಿಸಿದರು. ನಾಮಕರಣ ಸದ್ಯಕ್ಕಿಲ್ಲ.
ಡಾಕ್ಟರ್ ಸ್ವರ್ಣಲತಾ ಮಗುವಿನ ಆರೋಗ್ಯ ಚೆನ್ನಾಗಿದೆ. ತೂಕ, ಬೆಳವಣಿಗೆ ಚೆನ್ನಾಗಿದೆ ಎಂದು ತಿಳಿಸಿದರೆ, ಡಾ. ಶ್ರೀನಾಥ್ ವೈದ್ಯರು ಹೇಳಿದ ಪ್ರತಿಯೊಂದನ್ನೂ ಚಾಚೂತಪ್ಪದೆ ಪಾಲಿಸಿದ ಯಶ್-ರಾಧಿಕಾ ದಂಪತಿಗೆ ಆದರ್ಶ ತಂದೆ ತಾಯಿ ಎಂದು ಕರೆದರು.
ಆದರೆ, ಇಡೀ ಸುದ್ದಿಗೋಷ್ಟಿಯುದ್ದಕ್ಕೂ ಅತಿ ಹೆಚ್ಚು ಮಾತನಾಡಿದ್ದು ಮಗಳು ಐರಾ. ಎಲ್ಲರೂ ಮಾತನಾಡುತ್ತಿರುವಾಗ ಪುಟ್ಟ ಕಂದ ತಂತಾನೇ ಆ..ಊ.. ಎಂದುಕೊಂಡು ಮುದ್ದು ಮುದ್ದಾಗಿ ಉಲಿಯುತ್ತಲೇ ಇತ್ತು. ಮಗು ಮುದ್ದಾಗಿದೆ.