ಅಮೃತಮತಿ, ಜನ್ನನ ಯಶೋಧರ ಕವಿತೆ ಎಂಬ ಮಹಾಕಾವ್ಯದ ನಾಯಕಿ. ಸುರಸುಂದರಿಯಾಗಿದ್ದ ಅಮೃತಮತಿ, ಪತಿ ಯಶೋಧರನಲ್ಲಿ ಸುಖವನ್ನು ಕಾಣದೆ, ಗಜಲಾಯದ ಮಾವುತ ಅಷ್ಟಾವಂಕನಲ್ಲಿ ಮೋಹಗೊಳ್ಳುತ್ತಾಳೆ. ಇದನ್ನು ತಿಳಿದ ರಾಜ ಯಶೋಧರ ಆಕೆಯನ್ನು ಕೊಲ್ಲಲು ಮುಂದಾಗುತ್ತಾನೆ. ನಂತರ ಜೈನ ಧರ್ಮದ ನೆನಪಾಗಿ ಹಿಟ್ಟಿನ ಹುಂಜವನ್ನು ಬಲಿ ಕೊಡುತ್ತಾನೆ. ಅದರ ಸೌಂದರ್ಯಕ್ಕೆ ಮರುಳಾಗಿ ಆ ಹಿಟ್ಟಿನ ಹುಂಜಕ್ಕೆ ಆತ್ಮವೊಂದು ಸೇರಿಕೊಳ್ಳುತ್ತದೆ. ಹಿಟ್ಟಿನ ಹುಂಜವನ್ನು ಬಲಿಕೊಟ್ಟ ತಪ್ಪಿಗೆ ಆತ ಮಾನಸಿಕ ಹಿಂಸೆಗೊಳಗಾಗುತ್ತಾನೆ. ತನ್ನ ಮತ್ತು ಅಷ್ಟಾವಂಕನ ಅಕ್ರಮ ಸಂಬಂಧ ರಾಜನಿಗೆ ಗೊತ್ತಾಗಿದೆ ಎಂದು ತಿಳಿದ ಅಮೃತಮತಿ, ಪತಿಯನ್ನು ವಿಷವಿಕ್ಕಿ ಕೊಲ್ಲುತ್ತಾಳೆ. ಕೊನೆಗೆ ಹೀನಾಯ ಸಾವು ಕಂಡು ಧೂಮಪ್ರಭೆ ಎಂಬ ನರಕಕ್ಕೆ ಹೋಗುತ್ತಾಳೆ.
ಇದು ಜನ್ನನ ಯಶೋಧರ ಚರಿತೆಯ ಕಥೆ. ಇದೇ ಕಥೆಯನ್ನಿಟ್ಟುಕೊಂಡು ಗಿರೀಶ್ ಕಾರ್ನಾಡ್ ಹಿಟ್ಟಿನ ಹುಂಜ ಎಂಬ ನಾಟಕವನ್ನೂ ರಚಿಸಿದ್ದರು. ಜನ್ನನ ಕೃತಿಯನ್ನು ಆಧರಿಸಿ ಈಗ ಬರಗೂರು ರಾಮಚಂದ್ರಪ್ಪ, ಅಮೃತಮತಿ ಎಂಬ ಸಿನಿಮಾ ಮಾಡಿದ್ದಾರೆ. ಅಮೃತಮತಿಯ ಪಾತ್ರದಲ್ಲಿ ನಟಿಸಿರುವುದು ಹರಿಪ್ರಿಯಾ. ಎರಡು ತಿಂಗಳ ಹಿಂದೆ ಶುರುವಾಗಿದ್ದ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಹರಿಪ್ರಿಯಾ ತಮ್ಮ ಪಾತ್ರದ ಡಬ್ಬಿಂಗ್ ಕೂಡಾ ಮುಗಿಸಿಕೊಟ್ಟಿದ್ದಾರೆ. ಅದೂ ಒಂದೇ ದಿನದಲ್ಲಿ.
‘ಇದು 13ನೇ ಶತಮಾನದ ಕಥೆಯಾಗಿದ್ದರಿಂದ, ಸಂಭಾಷಣೆ ಸಖತ್ತಾಗಿತ್ತು. ಸಾಹಿತ್ಯದ ಪರಿಪೂರ್ಣ ಸೊಗಸು ಅಲ್ಲಿತ್ತು. ಇಷ್ಟು ಕಡಿಮೆ ಅವಧಿಯಲ್ಲಿಮುಗಿಸಿದ ನನ್ನ ಮೊದಲ ಸಿನಿಮಾ ಇದು ಎಂದಿರುವ ಹರಿಪ್ರಿಯಾ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಪ್ಲಾನಿಂಗ್ನ್ನು ಹೊಗಳಿದ್ದಾರೆ. ಅವರೊಬ್ಬ ಅದ್ಭುತ ನಿರ್ದೆಶಕ. ಇಂಥಾದ್ದೊಂದು ಚಿತ್ರದಲ್ಲಿ ನಟಿಸಿದ್ದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ ಹರಿಪ್ರಿಯಾ.
ಹರಿಪ್ರಿಯಾಗೆ ಕನ್ನಡ ಭಾಷೆಯ ಮೇಲೆ ಅದ್ಭುತ ಹಿಡಿತವಿದೆ. ಇದು ಹರಿಪ್ರಿಯಾ ಅಂತಹ ಕ್ಲಿಷ್ಪ ಪಾತ್ರದ ಸಂಭಾಷಣೆಯ ಡಬ್ಬಿಗ್ನ್ನು ಒಂದೇ ದಿನದಲ್ಲಿ ಮುಗಿಸಲು ಸಹಕಾರಿಯಾಗಿದೆ.