ಕೆಜಿಎಫ್ ಚಾಪ್ಟರ್ ೧ನಲ್ಲಿ ಪ್ರಮುಖ ಖಳನಾಯಕ ಸೂರ್ಯವರ್ಧನ್. ಆತನ ಸಹೋದರನೇ ಅಧೀರ. ಆದರೆ, ಸೂರ್ಯವರ್ಧನ್ ನಂತರ ನರಾಚಿ ಗಣಿಯ ಒಡೆಯನಾಗುವುದು ಆತನ ಮಗ ಗರುಡ. ಗರುಡನನ್ನು ಹೊಡೆಯುವುದು ಸುಪಾರಿ ಕಿಲ್ಲರ್ ರಾಕಿ. ಇದು ಕೆಜಿಎಫ್ ೧ ಶಾರ್ಟ್ & ಸ್ವೀಟ್ ಸ್ಟೋರಿ. ಅಧೀರನ ಪ್ರವೇಶ ಆಗುವುದು ಚಾಪ್ಟರ್ ೨ನಲ್ಲಿ.
ಆದರೆ, ಇಡೀ ಚಿತ್ರದಲ್ಲಿ ಎಲ್ಲಿಯೂ ಅಧೀರನ ದರ್ಶನ ಮಾಡಿಸಿರಲಿಲ್ಲ ನಿರ್ದೇಶಕ ಪ್ರಶಾಂತ್ ನೀಲ್. ಸ್ಯಾಂಪಲ್ಲಿಗೂ ಮುಖ ತೋರಿಸಿರಲಿಲ್ಲ. ಅದಕ್ಕೆ ಕಾರಣ, ಸಂಜಯ್ ದತ್. ಆ ಪಾತ್ರದ ಕಲ್ಪನೆ ಮೂಡಿದಾಗಲೇ ಸಂಜಯ್ ದತ್ ಅವರಿಂದಲೇ ಈ ಪಾತ್ರ ಮಾಡಿಸಬೇಕು ಎನಿಸಿತ್ತು. ಹೀಗಾಗಿ ಅಧೀರನ ಪಾತ್ರವನ್ನು ತೋರಿಸಿರಲಿಲ್ಲ. ಕೆಜಿಎಫ್ ಚಾಪ್ಟರ್ ೧ ನೋಡಿದರೆ, ಅವರು ಖಂಡಿತಾ ಈ ಪಾತ್ರ ಒಪ್ಪಿಕೊಳ್ತಾರೆ ಅನ್ನೋ ನಂಬಿಕೆ ಇತ್ತು. ಈಗ ಸಂಜಯ್ ದತ್ ಅಧೀರನ ಪಾತ್ರ ಮಾಡಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ ಎಂದಿದ್ದಾರೆ ಪ್ರಶಾಂತ್ ನೀಲ್.